ಶಬರಿಮಲೈ ದೇವಸ್ಥಾನಕ್ಕೆ ಹೆಣ್ಣು ಮಕ್ಕಳ ಪ್ರವೇಶ ಕುರಿತಂತೆ ತಗಾದೆ ಇಂದಿನದಲ್ಲ. ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಅಯ್ಯಪ್ಪ ಎಂಬ ದೇವರು ಇತ್ತೀಚೆಗೆ ನೂರಿನ್ನೂರು ವರ್ಷದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂತು. ರಾಜಕುವರಿಯೊಬ್ಬಳು ಪ್ರಾಣ ತ್ಯಾಗ ಮಾಡಿದಾಗ ಆಕೆಯನ್ನು ದೇವತೆ ಎಂದ ಹಲವು ಉದಾಹರಣೆ ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಹಲವೆಡೆ ಕಾಣಬಹುದು. ಅದರಂತೆಯೇ ಅಯ್ಯಪ್ಪ ಪಾಂಡ್ಯ ರಾಜಕುಲದ ರಾಜಕುವರ. ಹರಿಹರರ ಸ್ವರೂಪ ಎಂಬ ಪುರಾಣ ಕಥೆ ಎಲ್ಲವೂ ಅದಕ್ಕೆ ಹೊದಿಕೆಯಾಯಿತು. ಯಾವುದೇ ದೇವರನ್ನೂ ಒಂದೋ ವಿಷ್ಣು ಅಂಶ, ಶಿವ ಅಂಶ, ಶಾಕ್ತ ಅಂಶ ಎಂದು ಸೇರಿಸಿ ಗುಂಪು ಮಾಡುವುದು ಅನೂಚಾನವಾಗಿ ನಮ್ಮ ರೂಢಿಯಲ್ಲಿದೆ. ಇನ್ನು ಅಲ್ಲಿ ಜ್ಯೋತಿ ಕಾಣಿಸುವುದು, ಗರುಡ ಹಾರಾಡುವುದು ಇದರ ಬಗ್ಗೆ ಗಂಭೀರ ಚರ್ಚೆ ಅಗತ್ಯವಿಲ್ಲ. ಹೆಣ್ಣು ಮಕ್ಕಳ ಪ್ರವೇಶ ನಿಷೇಧ ಚರ್ಚಿಸಬೇಕಾದ ವಿಷಯವೇ.

ಹಿಂದಿನ ಕಾಲದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಆ ಕಾಡಿನ ನಡುವೆ ದಿನಗಟ್ಟಲೇ ಸಂಚರಿಸಬೇಕಿತ್ತು… ಈ ಸಮಯದಲ್ಲಿ ಮೈನರೆದ ಹೆಣ್ಣು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಕಷ್ಟಕರ ಸಂಗತಿಯಾಗಿತ್ತು, ಸೀಳುನಾಯಿ, ಹುಲಿ ಸೇರಿದಂತೆ ಹಲವು ಮೃಗಗಳು ಋತುಸ್ರಾವದ ರಕ್ತವನ್ನು ಹೆಚ್ಚು ಗ್ರಹಿಸಬಲ್ಲವು… ಮತ್ತು ದಾಳಿ ಮಾಡಲಿಕ್ಕೆ ಸಹಕಾರಿಯಾಗಿದ್ದವು. ಆದ್ದರಿಂದಲೇ ಚಿಕ್ಕ ಹೆಣ್ಣುಮಕ್ಕಳು, ವೃದ್ಧ ಹೆಂಗಸರಿಗೆ ಮಾತ್ರ ಪ್ರವೇಶ ಎಂಬ ಸಂಪ್ರದಾಯ ಪ್ರಾರಂಭವಾಯಿತು. ಹೆಣ್ಣು ಮತ್ತು ಗಂಡಿಗೆ ದೈಹಿಕ ವ್ಯತ್ಯಾಸ ಇದ್ದೇ ಇದೆ. ಎಷ್ಟೇ ಸಮಾನತೆ ಎಂದೆಲ್ಲಾ ಎದೆ ಬಡಿದುಕೊಂಡರೂ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಗಂಡು, ಹೆಣ್ಣು ಒಟ್ಟಾಗಿ ಸ್ಪರ್ಧಿಸುವಂತೆ ಮಾಡುವುದು ಅವೈಜ್ಞಾನಿಕ. ದೇಹ ಕ್ಷಮತೆ ಅನುಗುಣವಾಗಿ ವಿಭಾಗ ಮಾಡಬೇಕಾಗುತ್ತದೆ. ಇಲ್ಲಿ ಹೆಣ್ಣು ಮಕ್ಕಳ ದೂಷಣೆ, ಶೋಷಣೆ ಎಂಥದೂ ಇಲ್ಲ. ಜಾಗೃತೆಯ ಕ್ರಮವಷ್ಟೇ. ಇದರಂತೆಯೇ ಆ ದಿನದ ಹೆಣ್ಣುಮಕ್ಕಳ ಮನೋವೈಪರೀತ್ಯ, ದೈಹಿಕ ಆಲಸ್ಯ ಗಮನಿಸಿಯೇ ಅವರು ಮೂರು ದಿನ ಕೂರಬೇಕು ಎಂಬ ಪದ್ಧತಿಯೂ ಪ್ರಾರಂಭವಾಗಿದ್ದು. ಮೂಲವನ್ನು ಮರೆತು ಕಾಲಾಕಾಲದಲ್ಲಿ ಅತಿರೇಕ ಮಾಡಿದ್ದು ತಪ್ಪೇ ಆಗಿದೆ. ಯಜ್ಞ ಮಾಡುವುದರ ಮೂಲ ಕಲಿಯಿರಯ್ಯ ಎಂದರೆ, ಅಗ್ನಿಯನ್ನು ಹೊತ್ತಿಸಲು ಬೀಸಣಿಕೆಯನ್ನು ಮೊದಲು ಬಲಕ್ಕೆ ತಿರುವಬೇಕೋ, ಎಡಕ್ಕೆ ತಿರುವಬೇಕೋ ಎಂದು ಕರ್ಮಠರಾದ ದಡ್ಡತನವೂ ಈ ರೀತಿಯದ್ದೇ. ಈಗ ಆ ದಿನಗಳಿಗೆ ಬೇಕಾದ ಸಾಧನ, ವ್ಯವಸ್ಥೆ, ಸಾರಿಗೆ ಉತ್ತಮವಾಗಿರುವುದರಿಂದ ಈ ಸಂಪ್ರದಾಯವನ್ನು ಪುನರ್’ವಿಮರ್ಶೆ ಮಾಡಬಹುದು. ಸಂಪ್ರದಾಯವನ್ನು ಮುರಿಯುವುದು ಭಾರತೀಯರಿಗೆ ಅಷ್ಟು ಸುಲಭದ ಕೆಲಸವಲ್ಲ. ಆದರೆ ಸಂಪ್ರದಾಯದ ಮುರಿಯುವಿಕೆಯನ್ನೇ ಪ್ರಗತಿಪರತೆ ಎನ್ನುವುದು ಅಸಡ್ಡಾಳತೆಯ ಪ್ರತೀಕ.

ಹೆಣ್ಣುಮಕ್ಕಳಿಗೆ ಜನಿವಾರ ಧಾರಣೆಯೂ ಮೊದಲು ಇತ್ತು. ಋತುಚಕ್ರದ ಕಾರಣವಿಟ್ಟುಕೊಂಡೇ ಅದೂ ನಿಂತು ಹೋಯಿತು. ಲಿಂಗಾಯತ ಹೆಣ್ಣು ಮಕ್ಕಳು ಈಗಲೂ ಕರಡಿಗೆ ಧರಿಸುತ್ತಾರೆ, ಸೋ ಕಾಲ್ಡ್ ವೈದಿಕ ಸಂಸ್ಕೃತಿಯ ಮುಂದುವರಿಕೆಯೇ ಅದು. ದಯಾನಂದ ಸರಸ್ವತಿಯವರು ಅರ್ಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಜನಿವಾರ ಧಾರಣೆ ಮಾಡುವುದನ್ನು ಪ್ರಾರಂಭಿಸಿದರು. ಯಾವುದನ್ನೇ ವಿರೋಧಿಸುವ ಮೊದಲು ಅದರ ಮೂಲವನ್ನು ಅರಿತುಕೊಳ್ಳಬೇಕು. ವಿಮರ್ಶೆ ಮಾಡಿ, ನಂತರ ಸೂಕ್ತವಾದದ್ದನ್ನು ಮಾರ್ಪಾಡು ಮಾಡಬೇಕು. ಮೂಲ ಗೊತ್ತಿಲ್ಲದೆ, ವಿಮರ್ಶಿಸದೆ ಕೇವಲ ಅರೆಬೆಂದ ಕೂಗಾಟದಿಂದ ಬದಲಾವಣೆ ಸಾಧ್ಯವಿಲ್ಲ. ’ಕಾರಣ ಗೀರಣ ಕೇಳಬೇಡಿ ಹೋಗಬಾರದು ಅಂದರೆ ಹೋಗಬಾರದು’ ಎಂಬ ಉತ್ತರಗಳಿಂದ ಈ ಸಮಸ್ಯೆ ಉದ್ಭವಿಸಿದೆ. ’ಋತುಚಕ್ರದ ಸಂದರ್ಭ ಪ್ರಕೃತಿದತ್ತವಾದದ್ದು, ಅದರಲ್ಲಿ ಕೆಡುಕು ಆಗುವುದು ಏನಿಲ್ಲ, ಮನಃ ಶುದ್ಧಿ ಇದ್ದರೆ ಸಾಕು ದೇವರ ಮನೆಗೇ ಹೋಗಬಹುದು’ ಎಂಬುದು ಸಕಾರಣವಾದರೂ, ಇದಕ್ಕೆ ಇನ್ನಿತರ ಮಲಮೂತ್ರ ಉದಾಹರಣೆ ಕೊಟ್ಟರೆ ದುಷ್ತರ್ಕಗಳು ಏಳುತ್ತವೆ. ಆದ್ದರಿಂದ ದೈವಿಕ ಕೆಲಸಗಳಲ್ಲಿ ವೈಚಾರಿಕತೆಗಿಂತಲೂ ಸೂಕ್ಷ್ಮ-ಸಂವೇದಿ ಮುಖ್ಯವಾಗುತ್ತದೆ.

ಇಷ್ಟು ಹೇಳಿಯೂ ಸಹ ಒಂದು ಮಾತು ಸ್ಪಷ್ಟಮಾಡುತ್ತೇನೆ, ನಾನು ವಿಗ್ರಹಾರಾಧನೆಯನ್ನೇ ನಂಬೋಲ್ಲ. ಇನ್ನು ಗಂಡು ದೇವಸ್ಥಾನಕ್ಕೆ ಹೋಗಬೇಕಾ, ಹೆಣ್ಣು ಹೋಗಬೇಕಾ, ಸಂಜೆ ಪೂಜೆ ಮಾಡಬೇಕಾ, ರಾತ್ರಿ ಮಾಡಬೇಕಾ ಇಂಥಹ ಯಾವುದೂ ನನಗೆ ಮುಖ್ಯವೆನಿಸಿಲ್ಲ. ಆದರೆ ನನ್ನ ಧೋರಣೆ ಸಮಾಜದ ಧೋರಣೆ ಅಲ್ಲ. ನಮ್ಮ ಧೋರಣೆ ಸಮಾಜದ ಮೇಲೆ ಹೇರಿಕೆಯಾಗಬಾರದು. ಸಮಾಜದ ದೃಷ್ಟಿ ಮತ್ತು ಅಭಿವ್ಯಕ್ತಿಗಳ ವಿಶ್ಲೇಷಣೆಯನ್ನು ನೀಡಿ “ಜಗತ್ತು ಹೀಗಿದೆ, ಸಾಧಕ ಬಾಧಕ ನಿನ್ನದು” ಎಂದು ಆಯ್ಕೆ ನೀಡಬಹುದಷ್ಟೇ. ನನಗೆ ನನ್ನಲ್ಲೇ ಇರುವ ಬ್ರಹ್ಮನ ಬಗ್ಗೆ ಶ್ರದ್ಧೆ, ಇನ್ನೊಬ್ಬರಿಗೆ ಮೂರ್ತಿಯ ಬಗ್ಗೆ ಶ್ರದ್ಧೆ, ಒಬ್ಬರಿಗೆ ಶೂನ್ಯದ ಬಗ್ಗೆ ಶ್ರದ್ಧೆ, ಇನ್ನೊಬ್ಬಾತನಿಗೆ ದುಡಿಮೆಯ ಬಗ್ಗೆ ಶ್ರದ್ಧೆ. ಇಲ್ಲಿ ಸಾರ್ವತ್ರಿಕವಾಗಿ ಏನನ್ನೂ ಹೇರಲಿಕ್ಕೆ ಆಗೋಲ್ಲ. The God and the Dharma everything is oriented in individual entity, not in a community.

One clap, two clap, three clap, forty?

By clapping more or less, you can signal to us which stories really stand out.