ಸ್ವತಂತ್ರವೆಂಬ ಬಿಳಿ ಆನೆ

ನಮ್ಮದೊಂದು ಮಧ್ಯಮ ವರ್ಗದ ಅವಿಭಕ್ತ ಕುಟುಂಬ. ಬಡವರಂತೂ ಅಲ್ಲ. ಚೆನ್ನಾಗಿ ಬಾಳಬಹುದಾದಂಥಹ ಸಂಪತ್ತು. ಆದರೆ ಮನೆಯ ಯಾರಲ್ಲಿಯೂ ಹೊಂದಾಣಿಕೆ ಇಲ್ಲ. ಎಲ್ಲರೂ ತಮಗೆ ತೋಚಿದ್ದು ಮಾಡುವವರು. ಸರಿಯಾದ ನಾಯಕತ್ವವಿಲ್ಲ. ಮನೆಯ ಯಜಮಾನನಿಲ್ಲ. ಒಂದು ವ್ಯವಸ್ಥೆ ಇಲ್ಲ. ಆದರೂ ಹಂಗೊ ಹಿಂಗೊ ಬದುಕುತ್ತಿದ್ದಾದಾರೆ. ಆಗ ಧಿಡೀರನೆ ನಿಮ್ಮ ಮನೆಯ ಮೇಲೆ ಒಬ್ಬ ಬಲಿಷ್ಟನು ದಾಳಿ ಮಾಡುತ್ತಾನೆ. ನಮ್ಮ ಸಂಪತ್ತಿನ ಮೇಲೆ ಹಕ್ಕು ಸ್ಥಾಪಿಸುತ್ತಾನೆ. ಎಲ್ಲವೂ ತನ್ನದೇ ಎಂದು ಸಾಧಿಸುತ್ತಾನೆ. ತನಗೆ ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಾನೆ. ನಮ್ಮನ್ನೆಲ್ಲ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೆ. ಅವನು ಹೇಗೆ ಹೇಳುತ್ತಾನೋ ಹಾಗೆ ನಾವು ಕೇಳುವಂತೆ ಒತ್ತಡ ಹೇರುತ್ತಾನೆ. ದೌರ್ಜನ್ಯ ಎಸಗುತ್ತಾನೆ. ಹಿಂಸಿಸುತ್ತಾನೆ. ಹೊಡೆಯುತ್ತಾನೆ. ಅನ್ನವಿಲ್ಲದೆ ಮಲಗುವಂತೆ ಮಾಡುತ್ತಾನೆ. ಮನೆಯ ಎಲ್ಲ ಕೆಲಸಗಳನ್ನು ಮಾಡಿಸಿ ತಾನು ಆರಾಮವಾಗಿ ನೋಡಿ ಸುಖಿಸುತ್ತಾನೆ. ಇಷ್ಟೆಲ್ಲಾ ಅಟ್ಟಹಾಸ ನಡೆಸಿದರೂ ಅವನನ್ನು ನಾವು ಎನೂ ಮಾಡಲಾಗುತ್ತಿಲ್ಲ. ಅವನನ್ನು ಎದುರಿಸುವ ತಾಕತ್ತು ಇಲ್ಲವಾಗುತ್ತದೆ. ಅವನು ಕೇವಲ ಒಬ್ಬನಿದ್ದರೂ ನಾವೆಲ್ಲ ಅವನಿಗೆ ಎನನ್ನೂ ಮಾಡಲಾಗದ ಅಸಹಾಯಕತೆಯ ಅರಾಜಕತೆಯ ಸಾಕ್ಷಿ ಗಳಾಗಿ ಬಿಡುತ್ತವೆ. ಆವಾಗ ಮನೆಯಲ್ಲಿ ಒಬ್ಬ ಮಂಗಳ ಪಾಂಡೆ ಹುಟ್ಟಿಕೊಳ್ಳುತ್ತಾನೆ. ನಂತರ ಗೋಖಲೆ, ತಿಲಕ್, ಭಗತ್ ಸಿಂಗ್, ಆಜಾದ್, ಸಾವರ್ಕರ್, ಬೋಸ್, ಗಾಂಧೀಜಿ ಎಲ್ಲರೂ ಹುಟ್ಟಿಕೊಳ್ಳುತ್ತಾರೆ. ಎಲ್ಲರೂ ತಮ್ಮ ಬೆವರು ರಕ್ತ ಸುರಿಸಿ, ಪ್ರಾಣ ತ್ಯಾಗ ಮಾಡಿ ಮನೆಯಲ್ಲಿಯ ಮಾರಿಯನ್ನು ಕೊನೆಗೂ ಹೊರದಬ್ಬುತ್ತಾರೆ. ಆಗ ಆಗುವ ಸಂತಸ, ಹರ್ಷ,ಶಾಂತಿ, ನೆಮ್ಮದಿ, ಖುಷಿ ಅಳೆಯಲಾಗದು. ಅದುವೇ “ಸ್ವಾತಂತ್ರ್ಯ”. ಸ್ವಾತಂತ್ರ್ಯವನ್ನು ಒಂದು ವಾಕ್ಯದಲ್ಲೊ ಅಥವಾ ಒಂದು ಟಿಪ್ಪಣಿಯಲ್ಲೊ, ಒಂದು ಕಥೆಯಲ್ಲೊ, ಒಂದು ಉದಾಹರಣೆಯಲ್ಲೊ ವರ್ಣಿಸಲಾಗದು. ಅದು ಅನನ್ಯ, ಅನಂತ, ಅದಮ್ಯ, ಅಪೂರ್ವ, ಅಮೋಘ, ಅವರ್ಣೀಯ, ಅನೂಹ್ಯ. ಅದನ್ನು ಪಡೆದುಕೊಂಡ ನಾವೆಲ್ಲ ಧನ್ಯರು. ಇಂತಹ ಸ್ವಾತಂತ್ರ್ಯವನ್ನು ಅನುಭವಿಸಲು ಅದೆಷ್ಟೋ ಸ್ವಾತಂತ್ರ್ಯ ಸೆನಾನಿಗಳು ದೇಶ ಭಕ್ತರು ಆಗಸ್ಟ್ ೧೫ ೧೯೪೭ ರಲ್ಲಿ ಇರಲಿಲ್ಲ ಎಂಬುವುದು ವಿಷಾದದ ಸಂಗತಿ. ಕೆಲವೇ ಕೆಲವರು ಮಾತ್ರ ಅದರ ಸವಿಯುಂಡರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದೆಂದರೆ! ಅದು ಅಸಾಮಾನ್ಯ ದೇಶಭಕ್ತನಿಗೆ ಮಾತ್ರ ಸಾಧ್ಯ. ನಾವ್ಯಾರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲಾರೆವು. ಅಷ್ಟು ಕೆಚ್ಚೆದೆ, ಗಟ್ಟಿತನ, ಇಚ್ಛಾ ಶಕ್ತಿ, ಅದಮ್ಯ ದೇಶಪ್ರೇಮ ಯಾವುದೂ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಅವೆಲ್ಲ ಗುಣಗಳಿರುವುದು ನಮ್ಮ ಹೆಮ್ಮೆಯ ಸೈನಿಕರಲ್ಲಿ ಮಾತ್ರ. ಅವರೇ ನಮ್ಮ ದೇಶದ ವೀರ ಪುತ್ರರು. ನಮಗ್ಯಾರಿಗೂ ಅವರಷ್ಟು ದೇಶಪ್ರೇಮ ಹುಟ್ಟುವುದು ಸಂಶಯ. ಹುಟ್ಟಿದರೂ ದೇಶ ಕಾಯಲು ನಾವ್ಯಾರೂ ದೆಶದ ಗಡಿ ಕಾಯಲು ಹೋಗುವುದಿಲ್ಲ. ಸತ್ತರೆ ! ಎಂಬ ಭಯ. ಆದರೂ ನಾವು ದೇಶಪ್ರೇಮಿಗಳಲ್ಲ ಅಂತ ಹೇಳುವುದು ಸರಿಯಲ್ಲ. ದೇಶಪ್ರೇಮವೆಂದರೆ ಬರಿ ದೇಶಕ್ಕೆ ಪ್ರಾಣ ತ್ಯಾಗ ಮಾಡುವುದಲ್ಲ. ಅದು ದೇಶಪ್ರೇಮದ ಒಂದು ಅತ್ಯುನ್ನತವಾದ ದಾರಿ. ಆದರೆ ದೇಶಪ್ರೇಮ ತೋರಿಸಲು ಇನ್ನೂ ನೂರಾರು ದಾರಿಗಳಿವೆ. ನಾವು ನಮ್ಮ ಸಂವಿಧಾನದ ನ್ಯಾಯ ಪಾಲನೆ ಮಾಡಿದರೆ ಸಾಕು ದೇಶ ಸೇವೆ ಮಾಡಿದಂತೆಯೇ. ಎಲ್ಲ ನಾಗರೀಕರು ನಾಗರೀಕತ್ವ ಪಾಲನೆ ಮಾಡಿದರೆ ಸಾಕು. ಅದುವೇ ದೇಶಪ್ರೇಮ. ನಿಮ್ಮ ಪ್ರೀತಿಯ ಪಾತ್ರರಾದ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಕ್ಕ, ತಂಗಿ, ಅಣ್ಣ ತಮ್ಮರನ್ನು ಹೇಗೆ ನೀವು ಪ್ರೀತಿಸುತ್ತಿರೋ, ಗೌರವಿಸುತ್ತಿರೋ, ನೋಡಿಕೊಳ್ಳುತ್ತಿರೋ ಹಾಗೆಯೇ ನಿಮ್ಮ ತಾಯಿನೆಲವನ್ನು ನೋಡಿಕೊಳ್ಳಿ. ಅದುವೇ ದೇಶಪ್ರೇಮ. ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡಿ. ಎಲ್ಲರಲ್ಲೂ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ. ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸಿ. ಎಲ್ಲ ಧರ್ಮಿಯರನ್ನು ಸಮಾನರಂತೆ ಕಾಣಿ. ಬಡವರಿಗೆ ಸಹಾಯ ಮಾಡಿ. ಪರಿಸರವನ್ನು ಕಾಪಾಡಿ. ದೇಶದ ಬಗ್ಗೆ ಜಾಗೃತಿ ಮೂಡಿಸಿ. ಮಕ್ಕಳಲ್ಲಿ ದೇಶಾಭಿಮಾನ, ಪ್ರೀತಿ, ಹೆಮ್ಮೆ ಮೂಡುವಂತೆ ಮಾಡಿ. ಸ್ವಾಭಿಮಾನದಿಂದ, ನ್ಯಾಯಯುತವಾಗಿ ದುಡುದು ತಿನ್ನಿ. ಇನ್ನೂ ನೂರಾರು ದಾರಿಗಳಿವೆ. ಆದರೆ ದೇಶದ ಈಗಿನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಡುಕ ಹುಟ್ಟುವುದಂತೂ ಸತ್ಯ.
ಮನೆಯ ಎಲ್ಲ ಹಿರಿಯರು ಹೇಗೊ ಬಲಿಷ್ಠ ರಾಕ್ಷಸನ್ನು ಹೊರದಬ್ಬಿದ್ದಾಯಿತು. ಮತ್ತೆ ಎಲ್ಲ ಸಂಪತ್ತಿನ ಮೇಲೆ ಹಕ್ಕು ವಾಪಸ್ ಪಡೆದ್ದಾಯಿತು. ಇಷ್ಟೇಲ್ಲ ಗಳಿಸಲು ಎಷ್ಟೋ ಜನ ಪ್ರಾಣ ತ್ಯಾಗ ಮಾಡಬೇಕಾಯಿತು. ಈಗ ಮನೆಯಲ್ಲಿ ಉಳಿದಿರುವವರು ಅವರ ಮಕ್ಕಳು ಮತ್ತು ಮೊಮ್ಮಕ್ಕಳು. ಇವರುಗಳಲ್ಲಿ ಸಶಕ್ತರು, ಬಲಿಷ್ಟರು, ದೊಡ್ಡವರು, ಹಿರಿಯರು ಮನೆಯ ಯಜಮಾನಿಕೆಯನ್ನು ನೋಡಿಕೊಳ್ಳಬೇಕಲ್ಲವೇ. ಇವರೇಲ್ಲ ನಮ್ಮ ಪೂರ್ವಜರು ಹಾಕಿಕೊಟ್ಟ ಮೌಲ್ಯಗಳನ್ನು ಅನುಸರಿಸಿಕೊಂಡು ಮುಂದೆ ಸಾಗಬೇಕಲ್ಲವೇ. ಕನಿಷ್ಟಪಕ್ಷ ಇದ್ದದ್ದನ್ನು ಉಳಿಸಿಕೊಂಡು ಹೋಗಬೆಕಲ್ಲವೇ. ಆದರೆ ಆದದ್ದೇ ಬೇರೆ! ಎಂದು ರಾಜಕೀಯ, ರಾಜಕಾರಣ, ರಾಜಕಾರಣಿ ಎಂಬುದು ಶುರುವಾಯಿತೋ ಅಂದೇ ಮುಗಿಯಿತು ದೇಶದ ಭವಿಷ್ಯ. ಯಾವ ಅಸ್ತ್ರವನ್ನು ನಾವು ದೇಶದ ಭವಿಷ್ಯವನ್ನು ರೂಪಿಸಲು ಉಪಯೋಗಿಸಬೇಕೋ ಅದೇ ಅಸ್ತ್ರವನ್ನು ದೇಶದ ಭವಿಷ್ಯವನ್ನು ಹಾಳುಗೆಡವಲು ಉಪಯೋಗಿಸಲಾಯಿತು. ಸ್ವಾರ್ಥ, ಅಧಿಕಾರದ ಲೋಭ, ಅಹಂಕಾರ, ಹಣದಾಶೆ, ಭ್ರಷ್ಟಾಚಾರ, ಲಂಚ, ಜ್ಯಾತೀಯತೆ,ಅಸಮಾನತೆ ಹೀಗೆ ಎಲ್ಲ ಅನಿಷ್ಟಗಳೂ ರಾಜಕಾರಣದ ತಳಹದಿಯಲ್ಲಿ ಸೇರಿಕೊಂಡವು. ನಮಗೆ ಸ್ವಾತಂತ್ರ್ಯ ಯಾವ ಉದ್ದೇಶಕ್ಕಾಗಿ ಸಿಕ್ಕಿತು? ಹೇಗೆ ಸಿಕ್ಕಿತು? ಅದನ್ನು ಪಡೆಯಲು ಎಷ್ಟೋಂದು ವರ್ಷಗಳು ಬೇಕಾದವು? ಎಷ್ಟು ಜನರ ರಕ್ತದ ಕಾಲುವೆ ಹರಿಯಿತು? ಎಷ್ಟು ಜನರು ಪ್ರಾಣ ಕಳೆದುಕೊಂಡರು? ಎಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ದೇಹದ ಅಂಗಾಂಗಗಳನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ಹೆಣ್ಣು ಮಕ್ಕಳ ಮರ್ಯಾದೆ ಕಳೆದುಕೊಂಡರು? ಎಷ್ಟು ಜನ ಅನ್ನ ನೀರು ಸಿಗದೆ ಪ್ರಾಣ ಬಿಟ್ಟರು? ಈ ಮೇಲಿನ ಎಲ್ಲ ಪ್ರಶ್ನೆಗಳನ್ನು ನಮ್ಮ ರಾಜಕಾರಣಿಗಳು ಮರೆತೇ ಹೋದರು! ಅವರನ್ನು ಕಾಡಿದ ಒಂದೇ ಒಂದು ಪ್ರಶ್ನೆ ದೇಶದ ಸಂಪತ್ತನ್ನು ಹೇಗೆ ಕಬಳಿಸುವುದು??? ಅದೆಲ್ಲವುಗಳ ಪರಿಣಾಮವೇ ಈಗಿನ ಸ್ವತಂತ್ರ ಭಾರತ. ಸ್ವತಂತ್ರ್ಯ ಸಿಕ್ಕು ೭೦ ವರ್ಷಗಳಾದರೂ ಇನ್ನೂ ಸಾವಿರಾರು ಹಳ್ಳಿಗಳಲ್ಲಿ ಟಾರ್ ರಸ್ತೆಗಳಿಲ್ಲ, ವಿದ್ಯುತ್ ಇಲ್ಲ, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶಾಲೆಗಳಿಲ್ಲ. ೭೦ ವರ್ಷಗಳಾದರೂ ಇನ್ನೂ ನಾವು ೧೦೦℅ ಸಾಕ್ಷರತೆ ಇಲ್ಲ ಎಂಬುದೇ ನಾಚಿಕೆಗೇಡು. ಬಡವನು ಬಡವನಾಗಿಯೇ ಸಾಯುತ್ತಿದ್ದಾನೆ. ಶ್ರೀಮಂತನು ಇನ್ನೂ ಹೆಚ್ಚಿನ ಶ್ರೀಮಂತನಾಗಿ ಮೆರೆಯುತ್ತಿದ್ದಾನೆ. ೭೦ ವರ್ಷಗಳಾದರೂ ಇನ್ನೂ ಒಬ್ಬ ಬಡವನಿಗೆ ಒಂದು ಪ್ರಾಥಮಿಕ ಆರೋಗ್ಯ ಸೇವೆಯೂ ದೊರಕದೆ ಸತ್ತು ಹೆಣವಾಗುತ್ತಿದ್ದಾನೆಂದರೆ ನಿಜಕ್ಕೂ ಭಯಪಡಬೇಕಾದ ವಿಷಯ. ೭೦ ವರ್ಷಗಳಾದರೂ ನಮಗೆಲ್ಲ ಅನ್ನ ಹಾಕೊ ಅನ್ನದಾತ ರೈತ ತನ್ನ ಸ್ವಂತ ಹೊಟ್ಟೆ ತುಂಬಿಸಿಕ್ಕೊಳ್ಳಲಾರದೇ ನೇಣಿಗೆ ಶರಣಾಗುತ್ತಿದ್ದಾನೆಂದರೆ ಅದೆಂತ ದುಸ್ಥಿತಿ ಬಂದಿದಗಿರಬೇಕು ದೇಶಕ್ಕೆ!!! ನನಗೆ ನೆನಪಿರುವಂತೆ ೨೦ ವರ್ಷಗಳ ಹಿಂದೆ ಕೇಳಿದ ರಾಜಕಾರಣಿಗಳ ಅಭಿವೃದ್ಧಿ ಯೋಜನೆಗಳ ಭಾಷಣಕ್ಕೂ ಮತ್ತು ಈಗಿನ ಅಭಿವೃದ್ಧಿ ಯೋಜನೆಗಳ ಭಾಷಣಕ್ಕೂ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗದೇ ಹೋಯಿತು. ಕೂಲಿ ಮಾಡುವವನ ಕೈಯಲ್ಲಿ ಮೊಬೈಲ್ ಬಂದಿದೆಯೆ ಹೊರತು ಅವನು ಇನ್ನು ಒಂದೇ ಹೊತ್ತು ಊಟ ಮಾತ್ರ ಮಾಡುತ್ತಾನೆ. ತಪ್ಪು ಬರಿ ರಾಜಕಾರಣಿಗಳದ್ದಲ್ಲ, ಕೂಲಿಯವನದೂ ತಪ್ಪಿದೆ. ಅವನಿಗೆ ಒಂದು ಹೊತ್ತು ಊಟ ಮಾಡದೆ ಹೊದರೆ ಪರವಾಗಿಲ್ಲ ಆದರೆ ಮೊಬೈಲಿನಲ್ಲಿ ಇಂಟರ್ನೆಟ್ ಬೇಕೆ ಬೇಕು! ಇಂಥಹ ಪರಿಸ್ಥಿತಿ ಬಂದಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಉದ್ಯೋಗ ಸೃಷ್ಟಿ ಮಾಡಿ ಜನರನ್ನು ಸ್ವಾವಲಂಬಿ ಹಾಗೂ ಸ್ವಾಭಿಮಾನಿಗಳನ್ನಾಗಿಸುವ ಬದಲು ೧ ರುಪಾಯಿಗೆ ೧ ಕೆಜಿ ಅಕ್ಕಿ ಕೊಟ್ಟು, ಈಗಾಗಲೇ ಉದ್ಯೋಗದಲ್ಲಿರುವವರು ಉದ್ಯೋಗ ಬಿಡುವಂತೆ ಪ್ರೇರೆಪಿಸುತಿರುವ ರಾಜಕಾರಣಿಗಳಿರುವಾಗ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಿ ಏನು ಪ್ರಯೋಜನ? ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಬದಲು ರಾಷ್ಟ್ರ ವಿರೋಧಿ ಭಾವನೆಗಳನ್ನು ತುಂಬಲಾಗುತ್ತಿದೆ. ಜ್ಯಾತ್ಯಾತೀತತೆಯ ಬಗ್ಗೆ ತಿಳಿಸುವ ಬದಲು ಜ್ಯಾತೀಯತೆಯನ್ನು ಹೇರಲಾಗುತ್ತಿದೆ. ದೇಶಭಕ್ತಿಗೀತೆಗಳನ್ನು ಹಾಡಬೇಕಿರುವ ಮಕ್ಕಳು ದೇಶ ವಿರೋಧಿ ಘೋಷಣೆಯನ್ನು ಕೂಗುವಂತಾಗಿದೆ ನಮ್ಮ ದೇಶದ ಪರಿಸ್ಥಿತಿ. ನಮಗೆ ನಮ್ಮ ಮನೆಯನ್ನು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲವಾಗಿದೆ. ಇಂಥದ್ದರಲ್ಲಿ ದೇಶದ ಬಗ್ಗೆ ಚಿಂತಿಸುವ ಮನಸ್ಸು ಹುಡುಕುವುದು ಕಷ್ಟ.
ಕೊನೆಯ ಮಾತು, ಮನುಷ್ಯನ ಅತ್ಯಂತ ದುರಂತ ಸ್ಥಿತಿ, ದಾರುಣ ಸ್ಥಿತಿ, ದೌರ್ಭಾಗ್ಯ ಸ್ಥಿತಿ, ಕೆಟ್ಟ ಸ್ಥಿತಿ ಅಂದರೆ ಅದು “ಸಾವು”. ಅದನ್ನು ಯಾರೂ ಕೂಡ ಆಪೇಕ್ಷಿಸಲಾರ. ಯಾವ ಪ್ರಾಣಿ, ಪಕ್ಷಿ ಅಥವಾ ಭೂಮಿಯ ಮೇಲಿನ ಯಾವ ಜೀವಿಯೂ ಈ ಸ್ಥಿತಿಯನ್ನು ಇಚ್ಛಿಸಲಾರವು. ಅಂಥಹ ಸ್ಥಿತಿಯನ್ನು ತಾನಾಗಿಯೇ ಆಹ್ವಾನಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಗಡಿ ಕಾಯುವ ಸೈನಿಕರು ಮತ್ತು ಇನ್ನು ಇತರ ಅನೇಕ ದೇಶ ಭಕ್ತರು ಅದೆಂಥ ಅದ್ಭುತ, ಶ್ರೇಷ್ಠ, ತ್ಯಾಗಮಯಿ ಜೀವಿಗಳು ಎಂಬುದು ನಮಗೆ ಮನವರಿಕೆಯಾದರೆ ಸಾಕು, ದೇಶಕ್ಕಾಗಿ ನಾವೂ ಏನಾದರೂ ಮಾಡಬೇಕೆನಿಸುವುದಂತು ಸತ್ಯ. ಅಲ್ಲಿಗೆ ನಾವು ನಮ್ಮ ತಾಯಿ ನೆಲದ ಋಣ ತೀರಿಸಲು ಸಜ್ಜಾದಂತೆ.
ಜೈ ಹಿಂದ್ ಜೈ ಭಾರತ್.

– ಅಮಿತ ಪಾಟೀಲ

Like what you read? Give Amit Patil Algur a round of applause.

From a quick cheer to a standing ovation, clap to show how much you enjoyed this story.