ಪುಳಿಯೋಗರೆ ಮತ್ತು ಬಿಸಿಬೇಳೆ ಹುಳಿಯನ್ನ

Hamsanandi
Sep 7, 2018 · 2 min read

ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ ಮಾಡೋಹಾಗಿದ್ರೆ ನಿಮಗೆ ಹೇಳೋದಂತೂ ಮರೆಯೋದಿಲ್ಲ! ಈಗ ಈ ಹಳೇ ಒಂದು ವಿಷಯದ ನೆನಪು ನನ್ನ ತಲೆಯೊಳಗೆ ಹೊಕ್ಕಿತ್ತು. ಅದಕ್ಕೇ ಅಂತಾನೇ ಈ ಪುಳಿಯೋಗರೆ ಮತ್ತೆ ಬಿಸಿಬೇಳೆ ಹುಳಿಯನ್ನದ ಪುರಾಣ ಹೇಳೋಕೆ ಹೊರಟಿದ್ದು.

ನನಗಂತೂ ಅನ್ನವಿಲ್ಲದೇ ಒಂದು ಇದ್ದರೂ ಏನೋ ಕಳೆದುಕೊಂಡ ಹಾಗಾಗುತ್ತೆ. ದಿನಾಲೂ ತಿನ್ನೋ ಆ ಅನ್ನಕ್ಕೆ ಅಷ್ಟು ಸತ್ವ ಇರುತ್ತೆ ಅಂತ ಗೊತ್ತಾಗಿದ್ದು ನಾನು ಮಹಾರಾಷ್ಟ್ರದಲ್ಲಿ ಕೆಲಸ ಮಾಡಲು ಹೋದಾಗಲೇ. ಇನ್ನೂ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಯಾವುದೋ ಒಂದು ಹಾಸ್ಟೆಲ್ ನಲ್ಲಿ ವಾಸ, ಮತ್ತೆ ಒಂದು ಮೆಸ್ ನಲ್ಲಿ ಊಟ. ಆ ಮೆಸ್ ನಡೆಸುವಾಕೆಯಂತೂ ಚಪಾತಿ ಪಲ್ಯವನ್ನು ಬಡಿಸುವಾಗ ಅಷ್ಟೇನೂ ಹಿಂದೆಗೆಯದಿದ್ದರೂ, ಅನ್ನ ಬಡಿಸಲು ಮಾತ್ರ ಕಪಿಮುಷ್ಟಿಯೇ ಸರಿ! ಚಮಚಾಗಳ ಲೆಕ್ಕದಲ್ಲಿ ಅನ್ನ ಹಾಕಿದರೆ ದಿನಾ ಅನ್ನ ತಿನ್ನುವಂತಹವರಿಗೆ ಅದೆಷ್ಟು ಹಿಂಸೆ ಆಗಬಹುದು ಅಂತ ಗೊತ್ತಾಗಿದ್ದೇ ಆಗ. ಒಂದು ೩-೪ ವಾರ ಗಳಲ್ಲಿ ಮನೆ ಬಾಡಿಗೆಗೆ ಸಿಕ್ಕಿ, ನಾನು ನನ್ನ ಕೈಯಡುಗೆಯನ್ನೇ ತಿನ್ನುವಂತಾದ ಮೇಲೆ ಬದುಕಿದೆ.

ಒಂದೆರಡು ತಿಂಗಳಲ್ಲಿ ಬರೀ ಬದುಕುವಷ್ಟೇ ಅಲ್ಲದೆ ಚೆನ್ನಾಗೇ ಬದುಕುವಷ್ಟೂ ಅಡುಗೆ ಕೈ ಹತ್ತಿತು ಅನ್ನಿ. ನನ್ನ ಕೈ ರುಚಿ ನನ್ನ ಜೊತೆ ಕೆಲಸ ಮಾಡುತ್ತಿದ್ದವರಿಗೂ ಹತ್ತಿ, ಸಂಜೆ ಭೇಟಿ ಕೊಡತೊಡಗಿದರು. ಊಟದ ಸಮಯಕ್ಕೆ ಮನೆಗೆ ಬಂದವರನ್ನು ಊಟಕ್ಕೇಳಿ ಅನ್ನೋದು ಕನ್ನಡಿಗರಿಗೆ ಬಿಡಿ, ರಕ್ತದಲ್ಲೇ ಬಂದಿರುತ್ತೆ ಅನ್ನೋದು ನಿಮಗೂ ಗೊತ್ತಿದೆ. ಹಾಗಾಗಿ, ನನ್ನ ಅಡುಗೆಯ ರುಚಿಯನ್ನ ಅವರೂ ಆಗಿಂದಾಗ್ಗೆ ಕಾಣತೊಡಗಿದರು. ಊಟದ ದೆಸೆಯಿಂದಲೋ ಅಲ್ಲವೋ, ನಮ್ಮ ಮನೆಗೆ ಗೆಳೆಯರ ಹಾಯ್ದಾಟ ಹೆಚ್ಚೇ ಇತ್ತು, ನಾನು ಆ ಊರು ಬಿಡುವವರೆಗೆ.

ಈ ಊಟದ ವಿಷಯ ಮಾತಾಡೋವಾಗ ನೆನಪಿಗೆ ಬಂತು. ಯಾಕೋ ಬಹಳ ಜನ ಕನ್ನಡಿಗರಿಗೆ ಪುಳಿಯೋಗರೆಯನ್ನು ಚೆನ್ನಾಗಿ ಮಾಡೋಕೆ ಬರೋದಿಲ್ಲ ಅಂತ ಹೇಳೋದು ಕೇಳೇ ಇರ್ತೀರ. ಆದ್ರೆ, ಕನ್ನಡಿಗರು ಬಿಸಿಬೇಳೇ ಹುಳಿಯನ್ನ ಮಾಡೋದ್ರಲ್ಲಿ ಎತ್ತಿದ ಕೈ. ಬೇಕಿದ್ರೆ ಈ ಎರಡೂ ಮಾತು ಸರೀನೋ ಅಲ್ವೋ ಅನ್ನೋಕೆ ಒಂದಷ್ಟು ಕನ್ನಡದವರ ಮನೆಯಲ್ಲಿ ಎರಡನ್ನೂ ರುಚಿ ನೋಡಿ. ನಿಮಗೇ ಅನ್ಸತ್ತೆ. ಇಲ್ಲದಿದ್ರೆ. ಬೇರೆ ತಮಿಳೋರನ್ನೋ, ತೆಲುಗರನ್ನೋ ಕೇಳಿ. ಬಿಸಿಬೇಳೇ ಅನ್ನ ಮಾಡೋದ್ರಲ್ಲಿ ಕನ್ನಡಿಗರನ್ನ ಬಿಟ್ರಿಲ್ಲ ಅಂತ ಅವರುಗಳೂ ಒಮ್ಮತದಿಂದಲೇ ಒಪ್ಕೋತಾರೆ. ಹೀಗೆ ಒಂದನ್ನ ಚೆನ್ನಾಗಿ ಮಾಡೋವ್ರು ಇನ್ನೊಂದನ್ನು ಚೆನ್ನಾಗಿ ಮಾಡ್ದೇ ಇರೋದು ಒಂದು ಬೇಜಾರಿನ ವಿಷಯ ಅಲ್ವೇ ಅಂತ ಅನ್ನಿಸುತ್ತಿತ್ತು.

ಆದ್ರೆ, ಹಾಗೇನೂ ಬೇಸರಿಸುವ ಗೋಜಿಲ್ಲ ಅಂತ ಈಗೀಗ ಗೊತ್ತಾಗ್ತಿದೆ. ಇದನ್ನ ಸರಿಪಡಿಸುವುದು ಬಹಳ ಸಲೀಸು. ಒಂದೇ ದಾರಿ. ಕನ್ನಡಿಗರು ಇನ್ಮೇಲೆ ಪುಳಿಯೋಗರೆ ಮಾಡೋದೇ ಬೇಡ. ಅದರ ಬದಲು ಬರೀ ಬಿಸಿಬೇಳೆ ಹುಳಿಯನ್ನ ಮಾತ್ರ ಮಾಡ್ಬೇಕು. ಎಲ್ಲೋ ನೂರರಲ್ಲಿ ಹತ್ತೋ ಇಪ್ಪತ್ತೋ ಜನ ಚೆನ್ನಾಗಿ ಪುಳಿಯೋಗರೆ ಮಾಡ್ಬಿಟ್ರೆ ಸಾಲದು. ಉಳಿದವರು ಎಲ್ಲಿಗೆ ಹೋಗ್ಬೇಕು? ಅವರಿಗೇನು ತಮಗೆ ಪುಳಿಯೋಗರೆ ಮಾಡೋಕೆ ಬರೋಲ್ಲ ಅಂತ ಹೇಳಿಸಿಕೊಳ್ಳೋಕೆ ಹುಚ್ಚೇ? ಇಲ್ಲ ಸುಮ್ಮ ಸುಮ್ಮನೆ ಅವರು ಕಷ್ಟ ಪಟ್ಟು ಕಲಿತ್ಕೋಬೇಕೇನು ಬೇರೆಯವರನ್ನ ಮೆಚ್ಚಿಸೋಕೆ? ಅದರ ಬದಲು ಪುಳಿಯೋಗರೆ ಮಾಡೋದಕ್ಕೆ ಬರೋ ಕನ್ನಡಿಗರಿಗೂ ನೀವು ಪುಳಿಯೋಗರೆ ಮಾಡೋಹಾಗಿಲ್ಲ ಅಂತ ಕಟ್ಟು ಪಾಡು ಮಾಡಿದ್ರಾಯ್ತಪ್ಪ. ಇನ್ನೂ ಸುಲಭದ ದಾರಿ ಅಂದರೆ, ಪುಳಿಯೋಗರೆ ಅನ್ನುವುದು ಕನ್ನಡಿಗರು ಉಣ್ಣಲೇಬಾರದಂಥ, ಮಾಡಲೇಬಾರದಂಥ ಪದಾರ್ಥ, ಅವರ ನಾಲಿಗೆಗೆ ಅದು ಹತ್ತುವುದೂ ಇಲ್ಲ, ರುಚಿಸುವುದೂ ಇಲ್ಲ, ಅಂತ ಠರಾವು ಹೊರಡಿಸಿಬಿಟ್ಟರಾಯ್ತು. ಇನ್ನೂ ಬೇಕಂದ್ರೆ ಪುಳಿಯೋಗರೆ ಮಾಡಲು ಬೇಕಾದ ಯಾವುದಾದರೊಂದು ಸರಕು ಸರಂಜಾಮು ಕನ್ನಡಿಗರಿಗೆ ಸಿಗದೇ ಇರುವಂತೆ ನೋಡಿಕೊಂಡರೂ ಆಯಿತು. ಒಟ್ಟಲ್ಲಿ, ಪುಳಿಯೋಗರೆ ಚೆನ್ನಾಗಿ ಮಾಡೋಲ್ಲ ಅನ್ನೋ ಗುಲ್ಲು ಕೇಳಿಸದಂತಿದ್ದರೆ ಆಯಿತು. ಅಲ್ಲವೋ?

ಏನಂತೀರ?

-ಹಂಸಾನಂದಿ

(ಇದು ಸುಮಾರು ಎಂಟು ವರ್ಷಗಳ ಹಿಂದೆ ಬರೆದದ್ದು. ಒಂದೆರಡು ಸಣ್ಣ ತಿದ್ದುಪಡಿಗಳನ್ನು ಮಾಡಿ ಹಾಕಿದ್ದೇನೆ. ಇಷ್ಟು ದಿನಕ್ಕೂ ಪರಿಸ್ಥಿತಿ ಬದಲಾಗಿಲ್ಲ ಅನ್ನುವುದು ಕಳವಳವನ್ನು ತರುವ ಸಂಗತಿಯೇ. ಅಷ್ಟಲ್ಲದೇ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಂತ ಗಾದೆ ಮಾಡಿದ್ದಾರೇನು!)

Hamsanandi

Written by

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P

Welcome to a place where words matter. On Medium, smart voices and original ideas take center stage - with no ads in sight. Watch
Follow all the topics you care about, and we’ll deliver the best stories for you to your homepage and inbox. Explore
Get unlimited access to the best stories on Medium — and support writers while you’re at it. Just $5/month. Upgrade