ಅಮ್ಮ, ಅಪ್ಪ, ಅಂಕಲ್, ಆಂಟಿ, ಅಜ್ಜಿ, ತಾತ:

Letters For Black Lives
Letters for Black Lives
4 min readJun 22, 2020

--

This is the Kannada version of the open letter created by Letters for Black Lives, an ongoing project for people to create and translate resources on anti-Blackness for their communities in solidarity with #BlackLivesMatter. The letter was written and translated collaboratively by hundreds of people who want to have honest and respectful conversations with their parents about an issue important to them.

ನಾವು ಮಾತನಾಡಬೇಕು.

ನಾನು ಕಪ್ಪು ಜನಾಂಗದ ಜೀವ ಬಗ್ಗೆ ಆತಂಕಗೊಂಡಿದ್ದೇನೆ. ಅವರು ನನ್ನ ಜೀವನದ ಒಂದು ಮೂಲಭೂತ ಅಂಗವಾಗಿದ್ದಾರೆ: ಅವರು ನನ್ನ ಸ್ನೇಹಿತರು, ನೆರೆಯ ಮನೆಯವರು, ಮತ್ತು ನನ್ನ ಕುಟುಂಬದವರು. ಅವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ.

ಇತ್ತೀಚಿಗೆ, ಮಿನಸೋಟಾದಲ್ಲಿ, ಒಬ್ಬ ಬಿಳಿಯ ಪೊಲೀಸ್ ಅಧಿಕಾರಿ ಜೋರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಅವನ ಕುತ್ತಿಗೆಯ ಮೇಲೆ ಸುಮಾರು ಒಂಬತ್ತು ನಿಮಿಷ ಮಂಡಿಯೂರಿ ಕೊಂದರು. ಅವನು “ನನಗೆ ಉಸಿರಾಡಲು ಆಗುತ್ತಿಲ್ಲ” ಎಂದು ಗೋಗರೆದರೂ ಅವನ ಆಕ್ರಂದನ ಯಾರ ಕಿವಿಗೂ ಕೇಳಲಿಲ್ಲ. ಇಬ್ಬರು ಸಹ ಅಧಿಕಾರಿಗಳು ಅವನನ್ನು ಕೆಳಗೆ ಒತ್ತಿ ಹಿಡಿದರು. ನಾಲ್ಕನೆಯವ ಈ ಸನ್ನಿವೇಶಕ್ಕೆ ಕಾವಲುಗಾರನಂತೆ ನಿಂತರೇ ವಿನಃ ಮಧ್ಯಸ್ತಿಕೆ ಮಾಡಲಿಲ್ಲ. ಫ್ಲಾಯ್ಡ್ ಒಬ್ಬನೇ ಅಲ್ಲ ಈ ವರ್ಷ ಪೊಲೀಸ್ ಅಧಿಕಾರಿಗಳು ಇಂಡಿಯಾನಾದಲ್ಲಿ ಡ್ರೀಸ್ಜಾನ್ ರೀಡ್ ನನ್ನು, ಫ್ಲೋರಿಡಾದಲ್ಲಿ ಟೋನಿ ಮೆಕ್‌ಡೇಡ್ ನನ್ನು ಮತ್ತೆ ಕೆಂಟುಕಿಯಲ್ಲಿ ಬ್ರಿಯೋನ ಟೇಲರ್ ನನ್ನು ಕೊಂದರು. ಒಬ್ಬರು ಮಾಜಿ ಪೊಲೀಸ್ ಅಧಿಕಾರಿ ಜಾರ್ಜಿಯಾ ದಲ್ಲಿ ಅಹ್ಮದ್ ಆರ್ಬಾರಿ ಅನ್ನು ಕೊಂದರು.

ಅತ್ಯಧಿಕವಾಗಿ, ನ್ಯಾಯವನ್ನು ನಿರ್ಲಕ್ಷಿಸಲಾಗಿದೆ. ಸಾಕ್ಷಿ ಮತ್ತು ಮಾಧ್ಯಮ ಪ್ರಸಾರ ಇದ್ದರೂ, ಹೆಚ್ಚಿನ ಪೊಲೀಸರು ಕಪ್ಪು ಜನರ ಸಾಯಿಸಿದ ಪರಿಣಾಮಗಳನ್ನು ಎದುರಿಸಲಿಲ್ಲ. ಇನ್ನೂ ಎಷ್ಟೂ ಪ್ರಕರಣಗಳು ಕಾಣದಂತಾಗಿದೆ ಎಂದು ಯೋಚಿಸಿ.

ಈ ಭಯಾನಕ ಸತ್ಯದ ಜೊತೆ ನನ್ನ ಕಪ್ಪು ಸ್ನೇಹಿತರು ದಿನನಿತ್ಯ ಜೀವಿಸುತ್ತಾರೆ. ನಮ್ಮ ಜನರೊಡನೆ ಒಂದು ತಪ್ಪು ಕಲ್ಪನೆ ಇದೆ. ಏನಂದರೆ — ನಾವು ಅಮೇರಿಕಾಗೆ ಅಲ್ಪಸಂಖ್ಯಾತರಾಗಿ ಬಂದು, ಭೇದ ಇದ್ದರೂ, ಯಶಸ್ವೀ ಆಗಿದ್ದೇವೆ. ಆದ್ದರಿಂದ, ಅವರಿಗೂ ಇದು ಯಾಕೀ ಸಾಧ್ಯವಿಲ್ಲ? ನಾವು ಒಟ್ಟಿಗೆ ಕೆಲಸ ಮಾಡಿದರೆ, ಈ ಥರ ಯೋಚನೆ ತಪ್ಪೆಂದು ಸಾಬೀತುಪಡಿಸಬಹುದು. ನಾವು ನಮ್ಮನ್ನು ಪ್ರಜ್ಞಾವಂತರಾಗಿಸುವ ಮೂಲಕ ಪ್ರಾರಂಭಿಸಬಹುದು. ಪ್ರೀತಿಯಿಂದ ನಾವು ಇದನ್ನು ಹೇಗೆ ಮಾಡಬಹುದು ಎಂದು ನಿಮ್ಮ ಜೊತೆ ನಾನು ಮಾತನಾಡಲು ಭಯಸುತ್ತೇನೆ. ನಾನು ಸೇರಿದಂತೆ, ನಾವೆಲ್ಲರೂ ಇನ್ನೂ ಉತ್ತಮವಾಗಿ ವರ್ಥಿಸಬಹುದು.

ಈ ದೇಶದಲ್ಲಿ ನಾವು ಬಿಳಿಯರಾಗಿರುವ ಭಾಗ್ಯವನ್ನು ಹೊಂದಿಲ್ಲದಿದ್ದರೂ, ನಾವು ಕಪ್ಪು ಅಲ್ಲ ಎಂಬ ಭಾಗ್ಯವನ್ನು ಹೊಂದಿದ್ದೇವೆ. ನಾನು ಆಚೆ ಹೋದಾಗ ನಾನು ಹಿಂತಿರುಗುತ್ತೇನೆಯೇ ಎಂದು ನೀವು ಚಿಂತಿಸಬೇಕಾಗಿಲ್ಲ. ಪೊಲೀಸರು ನನ್ನನ್ನು ತಡೆದರೂ, ನನ್ನ ಜೀವಕ್ಕೆ ನೀವು ಭಯಪಡಬೇಕಾಗಿಲ್ಲ.

ನಮ್ಮ ಕಪ್ಪು ಗೆಳೆಯರು ಮತ್ತು ಅವರ ತಂದೆ ತಾಯಿಯರ ವಿಷಯದಲ್ಲಿ ಮಾತ್ರ ಈ ಭರವಸೆ ಸಾಧ್ಯವಿಲ್ಲ.

ಅಮೆರಿಕದಲ್ಲಿರುವ ಬಹುತೇಕ ಕಪ್ಪು ಜನರ ಪೂರ್ವಜರು ಅವರ ಇಚ್ಛೆಗೆ ವಿರುಧ್ಧವಾಗಿ ಕರೆತಂದು ಗುಲಾಮರೆಂದು ಮಾರಲ್ಪಟ್ಟ ಜನ. ಶತಮಾನಗಳಿಂದ ಅವರ ಜನಾಂಗ, ಅವರ ಸಮುದಾಯ, ಅವರ ಕುಟುಂಬ, ಮತ್ತು ಅವರ ದೇಹಗಳನ್ನು ಕೇವಲ ಲಾಭಕ್ಕೋಸ್ಕರವಾಗಿ ದುರುಪಯೋಗಿಸಲಾಗಿದೆ. ಗುಲಾಮಗಿರಿಯನ್ನು ನಿರ್ಮೂಲ ಮಾಡಿದ ನಂತರವೂ ಕಪ್ಪು ಬಣ್ಣದ ಅಮೆರಿಕನ್ನರು ಇನ್ನೂ ಅನೇಕ ಅಡೆತಡೆಗಳನ್ನು ಅನುಭವಿಸುತ್ತಿದ್ದಾರೆ. ಮತದಾನದ ಹಕ್ಕಾಗಲಿ, ಶಿಕ್ಷಣದ ಹಕ್ಕಾಗಲಿ, ಮನೆ ಮತ್ತು ಸ್ವಂತ ವ್ಯಾಪಾರ, ವ್ಯವಹಾರ ಮಾಡುವ ಹಕ್ಕಾಗಲಿ, ಪ್ರತಿಯೊಂದಕ್ಕೂ ಅವರು ಹೋರಾಡಬೇಕು. ಈಗಿನ ಪೋಲೀಸರ ಹಾಗು ಸೆರೆಮನೆಗಳ ಅಧಿಕಾರಿಗಳ ವರ್ತನೆಯಲ್ಲಿ ಹಿಂದಿನ ಕಾಲದ ಗುಲಾಮಗಿರಿ ಗಸ್ತು ಮತ್ತು ಕೂಲಿಕೆಲಸದ ದಿನಗಳ ಪ್ರಭಾವ ಇಂದೂ ಕಾಣಲು ಸಿಗುತ್ತದೆ. ಕಪ್ಪು ಜನರ ಮೇಲಿನ ಹಿಂಸಾತ್ಮಕ ದಬ್ಬಾಳಿಕೆ ಇನ್ನೂ ಮುಗಿದಿಲ್ಲ; ಅದರ ವೇಷ ಬದಲಾಗಿದೆ ಅಷ್ಟೆ. ನೂರಾರು ವರ್ಷ ಕಳೆದ ಮೇಲೂ ನಮ್ಮ ದೇಶದಲ್ಲಿ ಕಪ್ಪು ಜನರನ್ನು ಕೊಲ್ಲುವವರು ಯಾವುದೇ ಶಿಕ್ಷೆ ಅನುಭವಿಸದೇ ಸ್ವಚ್ಚಂದದಿಂದ ತಿರುಗಾಡುತ್ತಿದ್ದಾರೆ.

ನಮ್ಮ ಸಮುದಾಯ ಕೂಡ ಇಂತಹ ತಾರತಮ್ಯ ಮತ್ತು ಹಿಂಸಾಚಾರಗಳಿಂದ ಹೃದಯಾಘಾತಕಾರಿ ಪರಿಣಾಮಗಳನ್ನು ಅನುಭವಿಸಿದೆ. ೯/೧೧ ಆದ ನಂತರದ ದಿನಗಳು ನಿಮಗೆ ನೆನಪಿರಬಹು, ನಮ್ಮ ಸಮಾಜದ ಜನರು ಈ ದೇಶಕ್ಕೆ ಭಯೋತ್ಪಾದಕತೆಯನ್ನು ತಂದಿದ್ದಾರೆ ಎಂದು ಜನ ಆರೋಪಿಸಿದರು. ಈ ಕಾರಣಗಳಿಂದಾಗಿ ಕಳೆದ ೧೫ ವರ್ಷಗಳಿಂದ ವಿಮಾನ ನಿಲ್ದಾಣದ ಭದ್ರತಾ ಪಡೆಯವರು ಮತ್ತು ಇಮಿಗ್ರೇಷನ್ ಅಧಿಕಾರಿಗಳು ನಮ್ಮ ಜನರನ್ನು ಸತಾಯಿಸುವುದನ್ನು ಹಾಗು ಬಂಧಿಸುವುದನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಸಹ ನಮ್ಮ ಗುಡಿ ಗುಂಡಾರಗಳು ಹಾಗು ದೇವರನ್ನು ಪೂಜಿಸುವ ಸ್ಥಳಗಳನ್ನು ಕಣ್ಗಾವಲಿನಲ್ಲಿ ಇರಿಸುವುದಾಗಲಿ, ಬೇಕೆಂದೇ ಹಾಳು ಮಾಡುವುದಾಗಲಿ, ನಡೆದೇ ಇದೆ. ಈ ಹಿಂಸಾಚಾರ ಹೊಸದೇನಲ್ಲ. ೧೯ನೇ ಶತಮಾನದ ಶುರುವಾತಿನಲ್ಲಿ ದಕ್ಷಿಣ ಏಷ್ಯಾದಲ್ಲಿನ ವಸಾಹತುಶಾಹಿಯ ದಬ್ಬಾಳಿಕೆಯಿಂದ ತಪ್ಪಿಸಿಕೊಂಡು ಇಲ್ಲಿನ ಪಶ್ಚಿಮ ತೀರಕ್ಕೆ ಬಂದ ವಲಸೆಗಾರರು ಇಲ್ಲಿ ಆಗ ಜನಾಂಗೀಯ ಭೇದದಿಂದ ಉದ್ರೇಕಿತವಾದ ಹಿಂಸೆ ಮತ್ತು ಗಲಭೆಗಳನ್ನು ಎದುರಿಸಬೇಕಾಯಿತು. ಅದರಲ್ಲಿ ಕೆಲವು ಜನ ಭಾರತ ದೇಶದ ಸ್ವಾತಂತ್ರ್ಯಕ್ಕೋಸ್ಕರ ಸಹಾಯ ಕೂಡ ಮಾಡಿದರು. ಆ ಸಮಯದಲ್ಲಿ ಇಲ್ಲಿನ ಕಪ್ಪು ವರ್ಣಿಯ ಜನ ನಮ್ಮ ಮಿತ್ರರಾದರು. ಮುಂದೆ ಇಪ್ಪತ್ತು ವರ್ಷಗಳ ನಂತರ ಅವರು ಹೋರಾಟದಿಂದಾಗಿ ಅಮೇರಿಕಾದಲ್ಲಿ ಅನ್ಯಾಯಯುತ ಇಮಿಗ್ರೇಷನ್ ಕಾನೂನುಗಳು ಹಾಗು ಜನಾಂಗೀಯ ಪ್ರತ್ಯೇಕತೆಯನ್ನು ಕೊನೆಗಾಣಿಸಲಾಯಿತು. ಅವರ ಈ ಉನ್ನತ ಕಾರ್ಯದಿಂದಾಗಿ ಇಂದು ನಾವೆಲ್ಲರೂ ನಮ್ಮ ಸಮಾಜವನ್ನು ಇಲ್ಲಿ ಬೆಳೆಸಿದ್ದೇವೆ. ಈಗ ಇಲ್ಲಿ ನಲವತ್ತೈದು ಲಕ್ಷ ದಕ್ಷಿಣ ಏಷ್ಯಾದ ಜನರು ವಾಸವಾಗಿದ್ದಾರೆ. ನಾವೆಲ್ಲ ಉಪಯೋಗ ಪಡೆದುಕೊಳ್ಳುತ್ತಿರುವ ಹಾಗು ಅನುಭವಿಸುತ್ತಿರುವ ಈ ಹಕ್ಕುಗಳನ್ನು ಎಲ್ಲರಿಗೂ ಒದಗಿಸಿಕೊಡುವ ಪ್ರಯತ್ನದಲ್ಲಿ ಇಲ್ಲಿನ ಕಪ್ಪು ಜನರು ಪೊಲೀಸರಿಂದ ಪೆಟ್ಟು ತಿಂದರೂ, ಕಾರಾಗ್ರಹಕ್ಕೆ ಹೋದರೂ, ತಮ್ಮ ಪ್ರಾಣವನ್ನೇ ಅರ್ಪಿಸಿದರೂ, ಬಿಡದೆ ಸತತ ಹೋರಾಡುತ್ತಿದ್ದಾರೆ.

ಈಗ ನಡೆಯುತ್ತಿರುವ ಲೂಟಿ ಮತ್ತು ಆಸ್ತಿ-ಪಾಸ್ತಿಗಳ ನಾಶವನ್ನು ನೋಡಿ ನಿಮಗೆ ಚಿಂತೆ ಮತ್ತು ಹೆದರಿಕೆಯಾಗಿರಬಹುದು. ಆದರೆ ನಿಮಗೆ ಪ್ರತಿಭಟನೆಯ ಮಹತ್ವ ಹಾಗೂ ಶಕ್ತಿ ಗೊತ್ತೇ ಇದೆ. ನಮ್ಮ ಶ್ರಮ ಮತ್ತು ನಮ್ಮ ಜೀವನವನ್ನು ಕಡೆಗಣಿಸಿದ ಆಂಗ್ಲರ ವಿರುದ್ಧ ನಮ್ಮ ಜನ ಆಗ ಸಿಡಿದೇಳಲಿಲ್ಲವೇ?

ನಿಮ್ಮ ಪೂರ್ವಜರು ಹೋರಾಡಿದಂತಹ ದುಷ್ಟ ಶಕ್ತಿಗಳ ವಿರುಧ್ಧ, ನಿಮ್ಮ ಬೆವರು ಹಾಗು ಶ್ರಮದಿಂದ ಕಟ್ಟಿದ ದೇಶದಲ್ಲಿ, ನೀವು ಈಗ ಹಿಂಸಾಚಾರದ ವಿರುಧ್ಧ ಹೋರಾಡಬೇಕಿದ್ದರೆ ನಿಮ್ಮ ಮೇಲೆ ಎಂತಹ ಪರಿಣಾಮ ಆಗಬಹುದು? ಜೀವವಿಲ್ಲದ, ಕ್ಷುಲ್ಲಕ ವಸ್ತುಗಳು, ಬಟ್ಟೆ, ಕಿಟಕಿಗಳು, ನಿಮ್ಮ ಮಕ್ಕಳ ಜೀವಕ್ಕಿಂತ ಅಮೂಲ್ಯ ಎಂದು ತಿಳಿದಾಗ ನಿಮಗೆ ಎಷ್ಟು ಕೋಪ ಬರಬಹುದು? ಪ್ರಸ್ತುತ ಸಾಂಕ್ರಾಮಿಕ ಪಿಡುಗು ನಿಮ್ಮ ಸಮುದಾಯಕ್ಕೆ ಉಳಿದವರಿಗಿಂತ ಜಾಸ್ತಿ ಹಾನಿ ಮಾಡುತ್ತಿರುವಾಗ, ಮನೆಯಿಂದ ಹೊರ ಬಂದು ರಸ್ತೆಯ ಮಧ್ಯದಲ್ಲಿ ನಿಂತು ಪ್ರತಿಭಟಿಸುವಿರೆಂದರೆ ನಿಮಗೆಷ್ಟು ನೋವಾಗಿರಬಹುದು? ಒಂದು ಸಾರಿ ಕಲ್ಪಿಸಿಕೊಂಡು ನೋಡಿ.

ಈ ಕಾರಣಕ್ಕೋಸ್ಕರವಾಗಿ ನಾನು ಬ್ಲ್ಯಾಕ್ ಲೈವಸ್ ಮ್ಯಾಟರ್ (ಕಪ್ಪು ಜನರ ಜೀವಕ್ಕೂ ಬೆಲೆ ಇದೆ) ಎಂಬ ಚಳುವಳಿಯನ್ನು ಬೆಂಬಲಿಸುತ್ತೇನೆ.

ಆ ಬೆಂಬಲದ ಒಂದು ಭಾಗವೆಂದರೆ ನಮ್ಮ ಸಮುದಾಯದ ಜನರು — ಅಥವಾ ನಮ್ಮ ಕುಟುಂಬವು — ಕಪ್ಪು ಜನರ ಮಾನವೀಯತೆಯನ್ನು ಕುಂದಿಸುವಂತಹ ಕೆಲಸ ಮಾಡಿದಾಗ ಅಥವಾ ಮಾತನಾಡಿದಾಗ ನಾವು ಅವರಿಗೆ ತಿಳಿ ಹೇಳಬೇಕು. ಈ ಕಪ್ಪು ವೈರತ್ವವನ್ನು ನಮ್ಮ ಹಾಸ್ಯಗಳಲ್ಲಿ, ನಮ್ಮ ವಾಟ್ಸಾಪ್ ಫಾರ್ವರ್ಡ್ಗಳಲ್ಲಿ, ಅಥವಾ ನಾವು ದಾನ ಮಾಡುವ ಸಂಸ್ಥೆಗಳಲ್ಲಿ ಕಾಣಸಿಗಬಹುದು. ನಮ್ಮಲ್ಲಿ ಕೆಲವರು ಜಾತಿವಾದ ಮತ್ತು ವರ್ಣಭೇದ ನೀತಿಯ ಬಗ್ಗೆ ಹಾನಿಕಾರಕ ವಿಚಾರಗಳೊಂದಿಗೆ ಬೆಳೆದಿದ್ದಾರೆ, ಅದು ಇಂದಿಗೂ ನಮ್ಮ ಅಭಿಪ್ರಾಯಗಳನ್ನು ರೂಪಿಸುತ್ತಿದೆ. ಈ ವಿಷಯಗಳ ಬಗ್ಗೆ ನಮ್ಮ ಮೌನವು ಅಮೆರಿಕದಲ್ಲಿ ಮತ್ತು ನಮ್ಮ ತಾಯ್ನಾಡಿನಲ್ಲಿ ಕಪ್ಪು ಜನರ ಪ್ರಾಣಹಾನಿಗೆ ಕಾರಣವಾಗುತ್ತದೆ.

ನಮ್ಮ ಸಮೂದಾಯದಲ್ಲಿ ನಮ್ಮ ಪೂರ್ವಾಗ್ರಹಗಳನ್ನು ಕೆಡವಲು ಇನ್ನು ಬಹಳ ಕೆಲಸ ಇದೆ. ಆದರೆ ಕಳೆದ ಕೆಲವು ವಾರಗಳಿಂದ, ದಕ್ಷಿಣ ಏಷ್ಯಾದ ಸಮೂದಾಯದ ಸದಸ್ಯರಿಂದ ಒಗ್ಗಟ್ಟಿನ ಸ್ಪೂರ್ತಿದಾಯಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಮಿನಿಯಾಪೋಲಿಸ್ನಲ್ಲಿ ರುಹೇಲ್ ಇಸ್ಲಾಮ್ ಅವರ ರೆಸ್ಟೋರೆಂಟ್ ಪ್ರತಿಭಟನೆಯಲ್ಲಿ ಸುಟ್ಟುಹೋದಾಗ, ಅವರು ಹೇಳಿದರು “ನನ್ನ ಕಟ್ಟಡವು ಸುಟ್ಟರೆ ಸುಡಲಿ, ಆದರೆ ನ್ಯಾಯ ಸಿಗಲಿ.” ವಾಷಿಂಗ್ಟನ್ ಡೀ.ಸೀ. ನಲ್ಲಿ, ಅಶ್ರುವಾಯು ಮತ್ತು ಬಂಧನವನ್ನು ಎದುರಿಸುತ್ತಿರುವ 70 ಕ್ಕೂ ಹೆಚ್ಚು ಅಹಿಂಸಾತ್ಮಕ ಪ್ರತಿಭಟನಾಕಾರರಿಗೆ ಆಶ್ರಯ ನೀಡಲು ರಾಹುಲ್ ದುಬೆ ತಮ್ಮ ಬಾಗಿಲು ತೆರೆದರು. ಕಳೆದ ಶತಮಾನದಲ್ಲಿ ಕಪ್ಪು ಅಮೆರಿಕನ್ನರನ್ನು ಬೆಂಬಲಿಸುವಲ್ಲಿ ನಮ್ಮ ಏಕತೆಯ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದ ದಕ್ಷಿಣ ಏಷ್ಯನ್ನರ ದೀರ್ಘ ಸಾಲಿನಲ್ಲಿ ಅವರು ಇತ್ತೀಚಿನವರು. ನಾವು ಈ ಸಂಪ್ರದಾಯವನ್ನು ಮುಂದುವರಿಸಬೇಕಾಗಿದೆ.

ಈ ದೇಶ ನಿಮಗೆ ಯಾವಾಗಲೂ ದಯೆ ತೋರದಿದ್ದರೂ, ನೀವು ನಿಮ್ಮ ಹೋರಾಟವನ್ನು ನಿರಂತರವಾಗಿ ನಡೆಸಿದಿರಿ. ಇಂದು ನಾನು ಒಂದು ಒಳ್ಳೆಯ ಜೀವನ ನಡೆಸಲು ನಿಮ್ಮ ಆ ಸಂಘರ್ಷಣೆಯೇ ಕಾರಣ. ನಾನು ಇದಕ್ಕಾಗಿ ನಿಮಗೆ ಯಾವಾಗಲೂ ಚಿರಋಣಿ.

ಆದರೆ ಈ ಹೋರಾಟಗಳು, ನಾವೆಲ್ಲರೂ ಒಟ್ಟಾಗಿರುವುದನ್ನು ಸ್ಪಷ್ಟಪಡಿಸಿದೆ. ನಮ್ಮ ಎಲ್ಲಾ ಸ್ನೇಹಿತರು, ಪ್ರೀತಿಪಾತ್ರರು ಮತ್ತು ನೆರೆಹೊರೆಯವರು ಸುರಕ್ಷಿತವಾಗಿರುವವರೆಗೂ ನಾವು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ನಾವೆಲ್ಲರೂ ಇದು ನಮ್ಮದು ಎಂಬ ಜಗತ್ತಿನಲ್ಲಿ ಭಯವಿಲ್ಲದೆ ಬದುಕಲು ಬಯಸುತ್ತೇವೆ. ಈ ಭವಿಷ್ಯ ನನಗೆ ಬೇಕು — ಅದಕ್ಕೆ ನಿಮ್ಮ ಸಹಾಯ ಬೇಕು. ದಯವಿಟ್ಟು ಈ ಆಂದೋಲನದಲ್ಲಿ ನನ್ನೊಡನೆ ಪಾಲ್ಗೊಳ್ಳುವಿರಾ?

ಪ್ರೀತಿ ಮತ್ತು ಭರವಸೆಯೊಂದಿಗೆ,

ನಿಮ್ಮ ಮಕ್ಕಳು

Translated by

  • Anusha Kulkarni ಅನುಷ ಕುಲಕರ್ಣಿ
  • Darshan Markandaiah ದರ್ಶನ್ ಮಾರ್ಕಂಡೇಯ
  • Nisarga Markandaiah ನಿಸರ್ಗ ಮಾರ್ಕಂಡೇಯ
  • Shridhar Kulkarni ಶ್ರೀಧರ ಕುಲಕರ್ಣಿ

ಕಪ್ಪು ಜನರ ಜೀವನದ ಕುರಿತಾದ ಬಹಿರಂಗ ಪತ್ರದ ಕನ್ನಡ ಭಾಷಾಂತರವಿದು. ಬ್ಲ್ಯಾಕ್ ಲೈವ್ಸ ಮ್ಯಾಟ್ಟರ ಎನ್ನುವ ಚಳುವಳಿಯ ಸಮರ್ಥನೆಯಲ್ಲಿ, ಕಪ್ಪು ವರ್ಣಭೇದದ ವಿರೊಧದಲ್ಲಿ, ಅವಶ್ಯಕವಾದ ಸಾಹಿತ್ಯಿಕ ಸಂಪನ್ಮೂಲಗಳನ್ನು ಸೃಷ್ಟಿಸುವ ಹಾಗೂ ಭಾಷಾಂತರಿಸುವ ಒಂದು ಪ್ರಯತ್ನ. ಈ ಮಹತ್ವವಾದ ವಿಷಯದ ಬಗ್ಗೆ ತಮ್ಮ ತಂದೆ ಹಾಗೂ ತಾಯಿಯರ ಜೊತೆ ಒಂದು ಪ್ರಾಮಾಣಿಕ ಮತ್ತು ಗೌರವಯುತ ಸಂಭಾಷಣೆ ನಡೆಸಲು ನೂರಾರು ಜನರು ಸಹಕರಿಸಿ ಬರೆದ ಮತ್ತು ಭಾಷಾಂತರಿಸಿದ ಪತ್ರ ಇದು.

--

--