ಒಂದು ರಾಜ್ಯ ಹಲವು ಭಾಷೆ!
ಕರ್ನಾಟಕ ಏಕೀಕರಣವಾಗಿ ಇಂದಿಗೆ 64 ವರ್ಷ. ಸುಮಾರು 20 ಭಾಗಗಳಾಗಿ ಹಂಚಿಹೋಗಿದ್ದ ಕರುನಾಡನ್ನ ಒಂದುಗೂಡಿಸಲು ಹೋರಾಡಿದ ಆಲೂರು ವೆಂಕಟರಾಯರಂತಹ ಹಿರಿಯರು ಹಾಗು ವಿದ್ಯಾವರ್ಧಕ ಸಂಘಗಳಂತ ಹತ್ತಾರು ಸಂಘಟನೆಗಳನ್ನು ನೆನೆಯುವ ದಿನ. ಭಾಷಾವಾರು ಆಧಾರದ ಮೇಲೆ ರಾಜ್ಯ ಏಕೀಕರಣವಾಗಿದ್ದರು ಸಹ ನನ್ನ ಪ್ರಕಾರ ಇದು ಕನ್ನಡ ರಾಜ್ಯೋತ್ಸವ ಅಲ್ಲ, ಕರ್ನಾಟಕ ರಾಜ್ಯೋತ್ಸವ. ಹೌದು, ಎರಡಕ್ಕೂ ಬಹಳ ವತ್ಯಾಸಗಳಿವೆ. ಕಾರಣ ಇಷ್ಟೇ. ಭಾಷೆಯ ವಿಷಯ ಬಂದಾಗ ಅನ್ಯ ರಾಜ್ಯಗಳಿಗಿಂತ ಕರ್ನಾಟಕ ಬಹಳ ವಿಭಿನ್ನ. ನಮ್ಮ ರಾಜ್ಯದಲ್ಲಿ ಕನ್ನಡ ಬಿಟ್ಟು ಸುಮಾರು 35ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳಿವೆ. ಹೆಚ್ಚಿನವರಿಗೆ ತುಳು, ಕೊಂಕಣಿ, ಕೊಡವ ಭಾಷೆಗಳ ಬಗ್ಗೆ ಸ್ವಲ್ಪ ತಿಳಿದಿದ್ದರೂ ಉಳಿದ ಹತ್ತಾರು ಭಾಷೆಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲವೆಂಬುದು ನನ್ನ ಅನಿಸಿಕೆ. ಹಾಸನ ಹಾಗು ಮೈಸೂರಿನ ಕೆಲವು ಭಾಗಗಳಲ್ಲಿ ಮಾತನಾಡುವ ಸಂಕೇತಿ ಭಾಷೆ, ಕರಾವಳಿ ಹಾಗು ಮಲೆನಾಡಿನಲ್ಲಿ ಕೇಳಿಬರುವ ಬ್ಯಾರಿ ಭಾಷೆ, ಮಧ್ಯ ಕರ್ನಾಟಕದ ಕೆಲವೆಡೆ ಕೇಳಿಬರುವ ಲಂಬಾಣಿ ಭಾಷೆ, ಬಹಮನಿ ಸುಲ್ತಾನರ ಆಸ್ಥಾನದಲ್ಲಿ ಹುಟ್ಟಿ ೨-೩ ರಾಜ್ಯಗಳಲ್ಲಿ ಬಳಕೆಯಲ್ಲಿರುವ ದಖ್ಖನಿ ಭಾಷೆ, ಬಾಲ್ಯದಲ್ಲಿ ಕೇಳುತ್ತಿದ್ದ, ಇಂದು ಮರೆತೇ ಹೋಗಿರುವ ಹಕ್ಕಿ ಪಿಕ್ಕಿ ಜನಾಂಗದವರ ಮೂಲ ಭಾಷೆ, ಬುಡಕಟ್ಟು ಭಾಷೆಗಳಾದ ಕೊರಗ, ಇರುಳ, ಸಿದ್ದಿ, ಬಡಗ, ಸೋಲಿಗ,ಎರವ,ಗೌಳಿ, ಜೇನುಕುರುಬ ಹಾಗು ಬೆಟ್ಟಕುರುಬ. ವಿವಿಧ ಅಲೆಮಾರಿ ಜನಾಂಗದವರು ಮಾತನಾಡುವ ಭೈರ , ಸಿಂಧ್ ಮಾದಿಗ , ಮೊಗವೀರ , ಮುಕಾರಿ, ಕುಣಬಿ, ಕೆಪ್ಪೆ ಹೊಲೆಯ, ಮಾದಿಗ, ಹಸಲ, ಯಾನಾದಿಗ, ಇಲ್ಲಿಗ, ಚಂಚು, ಕೊರವ, ಕುಡಿಯ, ದಕ್ಕಳ, ಮಾಸ್ತೀಕಾರ, ಅಗೇರಾ ಹಾಗು ಪಿಂಜಾರ ಹಾಗು ಅಳಿವಿನಂಚಿನಲ್ಲಿರುವ ನಮ್ಮದೇ ಆದ ಅದೆಷ್ಟೋ ಭಾಷೆಗಳನ್ನು ಮನೆಯ ಹಿರಿಯಕ್ಕನಂತೆ ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮ ಕರ್ತವ್ಯ. ಒಂದು ಭಾಷೆಯ ಸಾವು ಕೇವಲ ಭಾಷೆಯ ಸಾವಲ್ಲ ಅದು ಒಂದು ಸಂಸ್ಕೃತಿ, ಆಹಾರ ಪದ್ಧತಿ, ಜೀವನಶೈಲಿ, ವೈದ್ಯ ಪದ್ಧತಿ ಹಾಗು ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವರ್ಷಗಳ ಇತಿಹಾಸದ ಸಾವು. George Steiner ಹೇಳುವಂತೆ, “When a language dies, a way of understanding the world dies with it, a way of looking at the world.” ವರ್ಷಕ್ಕೊಂದು ದಿನ ಬಾವುಟ ಹಿಡಿದು ಬೀದಿಯಲ್ಲೊಂದು ಆರ್ಕೆಸ್ಟ್ರ ನೆಡೆಸಿ ನಮ್ಮಕರ್ತವ್ಯ ಮುಗಿಯಿತೆಂದು ಭಾವಿಸದೆ, ಕೂಪ ಮಂಡೂಕಗಳಾಗದೇ, ನಾವು ಕನ್ನಡಿಗರು ನಮ್ಮದೇ ಆದ ವಿವಿಧ ಭಾಷೆಗಳ ಹಾಗು ಸಮಗ್ರತೆಯ ಅರಿವನ್ನು ಬೆಳೆಸಿಕೊಳ್ಳಬೇಕಾಗಿದೆ. ಕರ್ನಾಟಕದ ಎಲ್ಲಾ ಭಾಷೆಗಳು ಉಳಿದರೆ ಮಾತ್ರ ಕರ್ನಾಟಕದ ಬಲ ಹೆಚ್ಚುತ್ತದೆ.
