Hanuma- Bheema- Madhwa
Sri Sripadarajaru
Sri Jagannatha Dasaru

Madhwanama(ಮಧ್ವನಾಮ) - Sripadaraja

Sanjeev Sirnoorkar
3 min readApr 19, 2019

--

Sri Sripadaraja, a profound Yati of Madhwa Parampara, who is also known for his contribution towards the initiation and evolution of Haridasa Sahitya has a written “Madhwanama” in Kannada. Madhwanama is a biographical and the glorified explanation of Sri Madhwacharya.

Madhwanama has 4 elements, It explains the Mahima of Vayu and its 3 Avataras namely Hanuma, Bheema and Madhwa chronologically appeared in Treta Yuga, Dwapara Yuga and Kali Yuga. And at the end, it includes a “Phalashruti” written by Sri Jagannatha dasa.

Madhwanama is written in the metre “Kanda Padya” ಕಂದ ಪದ್ಯ which is a form of a poem in 4 lines with aadi prasa. The language, vocabulary used in this “Naama” is so simple, earthy and lucid.

One can also watch and listen to the Madhwanama beautifully rendered by Putturu Narasimha Nayak

Here is the entire text of Madhwa Naama.

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ

ಆವ ಕಚ್ಛಪ ರೂಪದಿಂದಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು

ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದಾ ಒಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು

ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆಂದು ಪೇಳುವರು ಬುಧಜನ

ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯ ಪವಮಾನನು

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂಲೋಕದೊಳಗೆ

ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದುಮುಂದಾಗಿ ನಡೆದ
ಪರಮ ಪವಮಾನ ಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ

ಅಖಿಲ ವೇದಗಳ ಸಾರ ಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪೇಳಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ಧನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ

ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡೆವೆನೆನೆ ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು

ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರವಡಿದು ಶತಶೃಂಗವೆಂದೆನಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರರಿಗೆ ಸುರ ನರರು ಸರಿಯೇ

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ

ದಾನವರ ಸವರಬೇಕೆಂದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ಕಾನನವ ಪೊಕ್ಕು ಕಿಮ್ಮಾರಾದಿಗಳ ಮುರಿದು
ಮಾನಿನಿಗೆ ಸೌಗಂಧಿಕವನೆ ತಂದ

ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರಕರಿಯ ಮಾಡಲವನಾ
ಗರಡಿ ಮನೆಯಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ
ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ
ವೀರ ನರಹರಿಯ ಲೀಲೆಯ ತೋರಿದ

ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಿಂ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ

ಚಂಡ ವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲಾ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿ ಗೀರ್ವಾಣ ಸಂತತಿಯಲಿ

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯೈದಿದ ಮಧ್ವಮುನಿರಾಯಗಭಿವಂದಿಪೆ

ಜಯ ಜಯತು ದುರ್ವಾದಿಮತತಿಮಿರ ಮಾರ್ತಾ೦ಡ
ಜಯಜಯತು ವಾದಿಗಜಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯತು ಜಗನ್ನಾಥ ಮಧ್ವನಾಥ

ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಂಗವಿಲ್ಲದೆ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ
ರಂಗವಿಠಲನೆಂದು ನೆರೆ ಸಾರಿರೈ

ಫಲಶ್ರುತಿ (ಜಗನ್ನಾಥದಾಸ ವಿರಚಿತ)

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ

ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪಕಳೆದಖಿಲ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು

--

--

Sanjeev Sirnoorkar

Student of Law and Indian Knowledge Traditions-Educator-Trainer-Researcher-Consultant-Prakruti Kendrita Samagra Vikasa-राष्ट्र-धर्म-शास्त्र-वेदान्त-भक्ति