ಹಣ ವಿನಂತಿ ವಂಚನೆ: ಹಾಗೆಂದರೇನು ಮತ್ತು ಅದರಿಂದ ನಿಮ್ಮ ಸುರಕ್ಷತೆ ಹೇಗೆ
--
ನಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ಬ್ಯಾಂಕ್ ಖಾತೆ, ಕಾರ್ಡ್ ಅಥವಾ OTP ವಿವರಗಳನ್ನು ಅಪರಿಚಿತ ಕರೆ ಮಾಡುವವರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು ಎಂಬುದು ತಿಳಿದಿದೆ. ಆದರೆ ಈ ವಿವರಗಳಿಲ್ಲದೆ ಮೋಸಗಾರರು ನಿಮಗೆ ಹಣಕಾಸಿನ ವಂಚನೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಈ ದಿನಗಳಲ್ಲಿ ಹಣ ವಿನಂತಿ ವಂಚನೆ ಹೆಚ್ಚುತ್ತಿದ್ದು, ವಂಚಕರಿಗೆ ನಿಮ್ಮ ಫೋನ್ ನಂಬರ್ ತಿಳಿದಿದ್ದರೂ ಸಾಕು, ನೀವು ಬಲಿಪಶುವಾಗಬಹುದು.
ಕಲೆಕ್ಟ್-ಕಾಲ್ / ಹಣಕ್ಕಾಗಿ ವಿನಂತಿ ಎಂದರೇನು?
PhonePe ಆ್ಯಪ್‌ನಲ್ಲಿನ ‘ವಿನಂತಿ’ ವೈಶಿಷ್ಟ್ಯವನ್ನು ಬಳಸಿ ಜನರು ನಿಮಗೆ ಹಣಕ್ಕಾಗಿ ವಿನಂತಿ ಸಲ್ಲಿಸಬಹುದಾಗಿದ್ದು, ಅವರಿಗೆ ಬೇಕಾದ ಮೊತ್ತವನ್ನು ಅವರೇ ಭರ್ತಿ ಮಾಡುವ ಅವಕಾಶ ಅದರಲ್ಲಿರುತ್ತದೆ.
PhonePe ಯಲ್ಲಿ ಹಣಕ್ಕಾಗಿ ವಿನಂತಿಸಿ
ಹಾಗೆ ಯಾರಾದರೂ ವಿನಂತಿಯನ್ನು ಕಳುಹಿಸಿದಾಗ, ನಿಮ್ಮ PhonePe ಆ್ಯಪ್‌ನಲ್ಲಿ ಒಂದು ಪಾಪ್-ಅಪ್ ತೆರೆಯುತ್ತದೆ.
ಆಗ ನೀವು ‘ಪಾವತಿಸಿ’ ಬಟನ್ ಕ್ಲಿಕ್ ಮಾಡಿ, UPI ಪಿನ್ ನಮೂದಿಸುವ ಮೂಲಕ ಪಾವತಿ ಮಾಡಬಹುದಾಗಿದೆ.
ಪಾಪ್-ಅಪ್‌ನಲ್ಲಿ ಕಾಣಿಸಿಕೊಳ್ಳುವ ಕಲೆಕ್ಟ್ ಕಾಲ್ ವಿನಂತಿ ಪ್ರಕಾರ ಪಾವತಿಸಿ
ನೀವು ವಿನಂತಿಯನ್ನು ‘ನಿರಾಕರಿಸಬಹುದಾಗಿದ್ದು’, ಅಂತಹ ಸಂದರ್ಭದಲ್ಲಿ ಆ ವಿನಂತಿಯು ಅಮಾನ್ಯವಾಗುತ್ತದೆ. ನಿರಾಕರಿಸುವ ಮೊದಲು, ನೀವು ವಿನಂತಿಸುವವರನ್ನು ಸಹ ನಿರ್ಬಂಧಿಸಬಹುದಾಗಿದೆ — ಇದು ಭವಿಷ್ಯದಲ್ಲಿ ಆ ವ್ಯಕ್ತಿಯು ಯಾವುದೇ ಕಲೆಕ್ಟ್ ಕಾಲ್ ಮೂಲಕ ನಿಮಗೆ ಹಣಕ್ಕಾಗಿ ಕೋರಿಕೆ ಸಲ್ಲಿಸುವುದನ್ನು ತಡೆಯುತ್ತದೆ.
ಹಣ ವಿನಂತಿ ವಂಚನೆ ಹೇಗೆ ಕೆಲಸ ಮಾಡುತ್ತದೆ ನೋಡಿ:
- Quikr, OLX ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಮಾರಾಟ ಪಟ್ಟಿಗಳಿಗೆ ಪ್ರತಿಕ್ರಿಯಿಸುವ ವಂಚಕರು
ನೀವು OLX, Quikr ಅಥವಾ ಅಂತಹುದೊಂದು ಸೈಟ್‌ನಲ್ಲಿ ನೀವು ಮಾರುವ ಉತ್ಪನ್ನವನ್ನು ಪೋಸ್ಟ್ ಮಾಡುತ್ತೀರಿ. ವಂಚಕನೊಬ್ಬ ನಿಮ್ಮ ಉತ್ಪನ್ನವನ್ನು ನೋಡಿ, ಆ ಉತ್ಪನ್ನವನ್ನು ಖರೀದಿಸಲು ಆಸಕ್ತಿ ಹೊಂದಿರುವುದಾಗಿ ನಿಮಗೆ ಕರೆ ಮಾಡುತ್ತಾನೆ. ಆತ ತನಗೆ ವೈಯಕ್ತಿಕವಾಗಿ ಭೇಟಿಮಾಡಿ ಪಾವತಿಸಲು ಆಗದಿರುವುದರಿಂದ PhonePe ಆ್ಯಪ್‌ನಲ್ಲಿ ಹಣ ಕಳಿಸಲು ಬಯಸುತ್ತಾರೆ ಎಂದು ನಿಮಗೆ ತಿಳಿಸುತ್ತಾನೆ. ಅಲ್ಲದೇ ಆತ ತಾನು ಸೈನ್ಯ, ಪೊಲೀಸ್, ಸರ್ಕಾರಿ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ತನ್ನ ಕುರಿತು ನಿಮ್ಮಲ್ಲಿ ನಂಬಿಕೆ ಬೆಳೆಸಲು ನೋಡುತ್ತಾನೆ.
ವಂಚಕನು ನೀವು ಕರೆಯಲ್ಲಿರುವಾಗಲೇ ನಿಮ್ಮ PhonePe ಆ್ಯಪ್ ತೆರೆಯಲು ಕೇಳುತ್ತಾನೆ ಮತ್ತು ಖರೀದಿ ಮೊತ್ತಕ್ಕೆ ಕಲೆಕ್ಟ್-ಕಾಲ್ (ಹಣ ಪಡೆಯಲು ವಿನಂತಿ) ವಿನಂತಿಯನ್ನು ನಿಮಗೆ ಕಳುಹಿಸುತ್ತಾನೆ. ಅನೇಕ ಬಾರಿ, ಅಂತಹ ವಂಚಕರು PhonePe ಲೋಗೊವನ್ನು ತನ್ನ ಪ್ರೊಫೈಲ್ ಚಿತ್ರವಾಗಿ ಬಳಸುತ್ತಾರೆ ಮತ್ತು ಅದು ನಿಮಗೆ ಕಲೆಕ್ಟ್ ಕಾಲ್ ವಿನಂತಿಯಲ್ಲಿ ಕಾಣಿಸುತ್ತದೆ. ಜೊತೆಯಲ್ಲಿ ಅವರು ‘ಪಾವತಿಸಿ’ ಬಟನ್ ಮೇಲೆ ‘ಒಮ್ಮೆ ನೀವು ಪಾವತಿಸಿದರೆ, ನೀವು ಹಣವನ್ನು ಸ್ವೀಕರಿಸುತ್ತೀರಿ’ (‘Once you pay, you will receive money’) ಎಂಬ ಸಂದೇಶವನ್ನು ಸಹ ಹಾಕುತ್ತಾರೆ.
ಇದು ವಂಚನೆಯ ಸಂದೇಶವಾಗಿರುತ್ತದೆ. PhonePe ಯಲ್ಲಿ ಹಣವನ್ನು ಸ್ವೀಕರಿಸಲು ನೀವು ಎಂದಿಗೂ ‘ಪಾವತಿಸಿ’ ಬಟನ್ ಕ್ಲಿಕ್ ಮಾಡಬೇಕಾಗಿಲ್ಲ ಅಥವಾ ನಿಮ್ಮ UPI ಪಿನ್ ಅನ್ನು ನಮೂದಿಸಬೇಕಾಗಿಲ್ಲ.
ಅಂತಹ ಮೋಸದ ಸಂದೇಶಗಳ ಕೆಲವು ಉದಾಹರಣೆಗಳೆಂದರೆ “Payment successful receive Rs. xxx”, “You received money”, “To receive click here for bank transfer” ಇತ್ಯಾದಿಗಳು.
ವಂಚಕನ ಹೆಸರು ಮತ್ತು ಸಂದೇಶವಿರುವ ಕಲೆಕ್ಟ್ ಕಾಲ್ ಕೋರಿಕೆ
2. Flipkart, Myntra ಮುಂತಾದ ಕಂಪನಿಗಳ ಪ್ರತಿನಿಧಿಗಳಂತೆ ನಟಿಸುವ ವಂಚಕರು.
ಇಂತಹ ಸನ್ನಿವೇಶಗಳಲ್ಲಿ, ವಂಚಕನೊಬ್ಬ ಕರೆ ಮಾಡಿ ನೀವು ಹಣವನ್ನು ಗೆದ್ದಿದ್ದೀರಿ ಎಂದು ಹೇಳುತ್ತಾನೆ ಮತ್ತು ನಿಮ್ಮನ್ನು ಅಭಿನಂದಿಸುತ್ತಾನೆ. ನಂತರ ಆತ ಆ ಹಣವನ್ನು Flipkart, PhonePe ಅಥವಾ ಯಾವುದೇ ಥರ್ಡ್ ಪಾರ್ಟಿ ವಾಲೆಟ್‌ಗೆ ವರ್ಗಾಯಿಸಬೇಕಾಗುತ್ತದೆ ಎನ್ನುತ್ತಾನೆ. ಕರೆಯಲ್ಲಿರುವಾಗಲೇ ನೀವು ಏನು ಬೇಕಾದರೂ ಖರೀದಿಸಬಹುದು ಎಂದು ಆತ ನಿಮಗೆ ಹೇಳಿ ನಿಮಗಾಗಿ ಒಂದು ಖರೀದಿಯನ್ನು ಸಕ್ರಿಯಗೊಳಿಸುತ್ತಾನೆ.
ಈ ಸನ್ನಿವೇಶದಲ್ಲಿ ವಂಚಕನ ಕಲೆಕ್ಟ್ ಕಾಲ್ ಈ ಕೆಳಗಿನಂತಿರುತ್ತದೆ:
ಈ ಕಲೆಕ್ಟ್ ಕಾಲ್ ವಿನಂತಿಯಲ್ಲಿ ವಂಚಕನು ಕಂಪನಿಯ ಲೋಗೋ ಮತ್ತು ಹೆಸರನ್ನು ಬಳಸಿದ್ದಾನೆ
ದಯವಿಟ್ಟು ನೆನಪಿಡಿ, ಯಾವುದೇ ಕಂಪನಿ ಅಥವಾ ವ್ಯಾಪಾರಿ ನಿಮ್ಮ ಪರವಾಗಿ ಹಣವನ್ನು ವರ್ಗಾಯಿಸಲು ಅಥವಾ ಖರೀದಿ ಮಾಡಲು ಕಲೆಕ್ಟ್-ಕಾಲ್ ವಿನಂತಿಯನ್ನು ಕಳುಹಿಸುವುದಿಲ್ಲ.
3. PhonePe ಗ್ರಾಹಕ ಬೆಂಬಲ ಪ್ರತಿನಿಧಿಗಳಂತೆ ನಟಿಸುವ ವಂಚಕರು
ಇಂತಹ ಸನ್ನಿವೇಶಗಳಲ್ಲಿ ವಂಚಕರು Twitter ನಲ್ಲಿ ನಕಲಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಸಾರ ಮಾಡುತ್ತಾರೆ, ಆ್ಯಪ್‌ನಲ್ಲಿ ಹಣ ವರ್ಗಾವಣೆ, ಕ್ಯಾಶ್‌ಬ್ಯಾಕ್, KYC ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿಕೊಳ್ಳುತ್ತಾರೆ.
Twitter ನಲ್ಲಿ ಪ್ರಕಟಿಸಲಾಗಿರುವ ನಕಲಿ PhonePe ಸಹಾಯವಾಣಿ ಸಂಖ್ಯೆಗಳು
ಇಂತಹ ಸಂದರ್ಭಗಳಲ್ಲಿ, ನೀವು ಈ ನಕಲಿ ಸಂಖ್ಯೆಗೆ ಕರೆ ಮಾಡಿ, ಬಾಕಿ ಉಳಿದಿರುವ ವಹಿವಾಟು ಅಥವಾ ಕ್ಯಾಶ್‌ಬ್ಯಾಕ್ ಸಮಸ್ಯೆಯ ಬಗ್ಗೆ ದೂರು ನೀಡಿದರೆ, ಅವರು PhonePe ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು ಕಲೆಕ್ಟ್ ಕಾಲ್ ವಿನಂತಿಯನ್ನು ಕಳುಹಿಸುತ್ತಾರೆ. ಈ ವಿನಂತಿಯು ನಿಮ್ಮ ವಿಫಲ ವಹಿವಾಟಿನ ಮೊತ್ತವನ್ನೇ ಹೊಂದಿರುತ್ತದೆ ಮತ್ತು ವಂಚಕರು ನಿಮ್ಮನ್ನು ‘ಪಾವತಿಸಿ’ ಕ್ಲಿಕ್ ಮಾಡಿ ಮತ್ತು ನಿಮ್ಮ UPI ಪಿನ್ ನಮೂದಿಸಲು ಕೇಳುತ್ತಾರೆ.
PhonePe ಬೆಂಬಲದ ಹೆಸರಿನಲ್ಲಿ ವಂಚಕ ಪ್ರೊಫೈಲ್‌ನಿಂದ ಬಂದ ಕಲೆಕ್ಟ್ ಕಾಲ್ ವಿನಂತಿ
ದಯವಿಟ್ಟು ಗಮನಿಸಿ, PhonePe ಯಾವುದೇ ಸಹಾಯವಾಣಿ ಸಂಖ್ಯೆಯನ್ನು Twitter ನಲ್ಲಿ ಪ್ರಕಟಿಸುವುದಿಲ್ಲ. ನಾವು ಈ ವಿವರಗಳನ್ನು @PhonePeSupport ನಿಂದ ಮಾತ್ರ ಪೋಸ್ಟ್ ಮಾಡುತ್ತೇವೆ. ಇದು Twitter ನಲ್ಲಿರುವ ನಮ್ಮ ಪರಿಶೀಲಿಸಿದ ಏಕೈಕ PhonePe ಸಹಾಯವಾಣಿ ಖಾತೆಯಾಗಿದೆ.
4. ನಿಮ್ಮ ಪರವಾಗಿ ಚಿನ್ನವನ್ನು ಖರೀದಿಸುವಂತೆ ನಟಿಸುವ ವಂಚಕರು
ಇಂತಹ ಸಂದರ್ಭಗಳಲ್ಲಿ, ವಂಚಕರು PhonePe ಯಲ್ಲಿ ಚಿನ್ನ ಖರೀದಿಸಲು ನಿಮ್ಮ UPI ಐಡಿಯನ್ನು ಬಳಸುತ್ತಾರೆ. ಇದರಲ್ಲಿ, ನಿಮಗೊಂದು ಪಾವತಿ ಮಾಡುವ ವಿನಂತಿಯನ್ನು ಕಳಿಸಿ, ಅದರಲ್ಲಿ ನೀವು ಸ್ವಲ್ಪ ಮೊತ್ತವನ್ನು ಪಾವತಿ ಮಾಡುವ ಮೂಲಕ ನಿಮ್ಮ ಲಾಕರ್‌ನಲ್ಲಿ ಚಿನ್ನವನ್ನು ಪಡೆಯಬಹುದು ಎಂಬ ಸಂದೇಶ ಕಳಿಸುತ್ತಾರೆ. ಈ ಸನ್ನಿವೇಶದಲ್ಲಿ ವಂಚಕರ ಕಲೆಕ್ಟ್ ಕಾಲ್ ಈ ಕೆಳಗಿನಂತಿರುತ್ತದೆ:
ಚಿನ್ನ ನೀಡುವ ಭರವಸೆಯೊಂದಿಗೆ ಬರುವ ವಂಚಕರ ಕಲೆಕ್ಟ್ ಕಾಲ್ ವಿನಂತಿ
ದಯವಿಟ್ಟು ನೆನಪಿಡಿ, ನಿಮ್ಮ ಪರವಾಗಿ ಯಾರೂ ಚಿನ್ನವನ್ನು ಖರೀದಿಸಲು ಮತ್ತು PhonePe ಬಳಸಿ ಅದನ್ನು ನಿಮ್ಮ ಲಾಕರ್‌ಗೆ ಕಳುಹಿಸಲು ಸಾಧ್ಯವಿಲ್ಲ. ನಿಮ್ಮ ಸ್ವಂತ ಖಾತೆಯನ್ನು ಬಳಸಿಕೊಂಡು ಮಾತ್ರ ನೀವು ಚಿನ್ನವನ್ನು ಖರೀದಿಸಬಹುದು.
ಸುರಕ್ಷಿತವಾಗಿರಲು ಈ ಕೆಳಗಿನವುಗಳನ್ನು ನೆನಪಿಟ್ಟುಕೊಳ್ಳಿ:
- PhonePe ಯಲ್ಲಿ ನೀವು ಬೇರೆಯವರಿಂದ ಹಣ ಸ್ವೀಕರಿಸಲು ‘ಪಾವತಿ’ ಮಾಡುವ ಅಥವಾ ನಿಮ್ಮ UPI ಪಿನ್ ನಮೂದಿಸುವ ಅಗತ್ಯವಿಲ್ಲ ಎಂಬುದನ್ನು ಯಾವತ್ತೂ ನೆನಪಿಡಿ. ನಿಜವಾಗಿ ಹಣ ಕಳುಹಿಸುವವರಿಗೆ ನಿಮ್ಮ ಫೋನ್ ಸಂಖ್ಯೆ ಮಾತ್ರ ಬೇಕಾಗುತ್ತದೆ.
- ಒಂದು ವೇಳೆ ನಿಮಗೆ ಯಾರಾದರೂ ಮೋಸದ ಕಲೆಕ್ಟ್-ಕಾಲ್ ವಿನಂತಿಯನ್ನು ಕಳುಹಿಸಿದ್ದರೆ, ಅದನ್ನು ನಿರಾಕರಿಸಿ ಮತ್ತು ಆ್ಯಪ್‌ನಲ್ಲಿ PhonePe ಬೆಂಬಲವನ್ನು ಸಂಪರ್ಕಿಸಿ.
- PhonePe ನಿಮ್ಮ ವೈಯಕ್ತಿಕ ವಿವರಗಳಿಗಾಗಿ ಯಾವತ್ತೂ ಕೇಳುವುದಿಲ್ಲ. PhonePe ಪ್ರತಿನಿಧಿಯಂತೆ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಮತ್ತು @phonepe.com ಡೊಮೇನ್‌ನಿಂದ ಬರುವ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.
- Google, Twitter, FB ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ PhonePe ಗ್ರಾಹಕ ಬೆಂಬಲ ನಂಬರ್‌ಗಳಿಗಾಗಿ ಹುಡುಕಬೇಡಿ. PhonePe ಗ್ರಾಹಕ ಬೆಂಬಲವನ್ನು ಸಂಪರ್ಕಿಸುವ ಅಧಿಕೃತ ಮಾರ್ಗವೆಂದರೆ https://phonepe.com/en/contact_us.html ಮೂಲಕ ಸಂಪರ್ಕಿಸುವುದು ಮಾತ್ರ.
- PhonePe ಬೆಂಬಲ ಎಂದು ಹೇಳಿಕೊಳ್ಳುವ ಪರಿಶೀಲಿಸದ ಮೊಬೈಲ್ ನಂಬರ್‌ಗಳಿಗೆ ಎಂದಿಗೂ ಕರೆ ಮಾಡಬೇಡಿ / ಅವುಗಳ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.
- ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.
● Twitter ಹ್ಯಾಂಡಲ್‌ಗಳು: https://twitter.com/PhonePe , https://twitter.com/PhonePeSupport
- Facebook ಖಾತೆ: https://www.facebook.com/OfficialPhonePe/
- ವೆಬ್ಸೈಟ್: support.phonepe.com
ಒಂದು ವೇಳೆ ನಿಮ್ಮ ಕಾರ್ಡ್ ಅಥವಾ ಖಾತೆ ವಿವರಗಳು ಕಳೆದುಹೋದರೆ:
- support.phonepe.com ಗೆ ವರದಿ ಮಾಡಿ
- ನಿಮ್ಮ ಹತ್ತಿರದ ಸೈಬರ್ ಸೆಲ್ ಅನ್ನು ಸಂಪರ್ಕಿಸಿ ಮತ್ತು ಪೊಲೀಸರಿಗೆ ದೂರು ನೀಡಿ