ಪಾಂಡಿತ್ಯರಸಪ್ರತೀಕ — ಶ್ರೀ ಸೇಡಿಯಾಪು ಕೃಷ್ಣಭಟ್ಟ

ಅನಪೇಕ್ಷಿತಗುರುವಚನಾ ಸರ್ವಾನ್ಗ್ರಂಥೀನ್ವಿಭೇದಯತಿ ಸಮ್ಯಕ್ |
ಪ್ರಕಟಯತಿ ಪರರಹಸ್ಯಂ ವಿಮರ್ಶಕಶಕ್ತಿರ್ನಿಜಾ ಜಯತಿ ||

ಗುರೂಪದೇಶದ ಅಪೇಕ್ಷೆಯಿಲ್ಲದೆ ಕಗ್ಗಂಟಿನಂಥ ಎಲ್ಲ ತೊಡಕುಗಳನ್ನೂ ಸುಲಭವಾಗಿ ನಿವಾರಿಸಿಕೊಳ್ಳುವ ಹಾಗೂ ಗಹನವಾದ ಪರಮರಹಸ್ಯವನ್ನೂ ಅರ್ಥೈಸಿಕೊಳ್ಳುವ ಸಾಮರ್ಥ್ಯವು ಸ್ವಂತವಿಮರ್ಶಕಶಕ್ತಿಯಿಂದ ಲಭಿಸುವುದು.

Sediyapu Krishna Bhatta

ಶ್ರೀಯುತ ಸೇಡಿಯಾಪು ಕೃಷ್ಣಭಟ್ಟರನ್ನು (8.6.1902–8.6.1996) ನೆನೆದಾಗಲೆಲ್ಲ ವಲ್ಲಭದೇವನ ಸುಭಾಷಿತಾವಲಿಯ ಪ್ರಕೃತಪದ್ಯವು ನನಗೆ ನೆನಪಾಗುತ್ತದೆ. ಅಕ್ಷರಶಃ ಇದರಂತೆಯೇ ಇತ್ತು ಅವರ ಮೇಧೆ. ಜ್ಞಾನದ ಸಂಪಾದನೆ ಮತ್ತು ಅದರ ಪ್ರಸಾರವನ್ನು ತಪಸ್ಸಿನಂತೆ ನಡೆಸಿದವರು ಕೃಷ್ಣಭಟ್ಟರು. ಮನುಷ್ಯನೊಬ್ಬನಿಗೆ ಎಷ್ಟು ವಿಷಯಗಳಲ್ಲಿ ಪರಿಣತಿಯಿದೆ ಎಂಬುವುದು ಮುಖ್ಯವಲ್ಲ; ಆತನ ತಿಳಿವಳಿಕೆಯ ನಿರ್ದಿಷ್ಟತೆ, ನಿರ್ದುಷ್ಟತೆಗಳಷ್ಟೇ ಮುಖ್ಯ ಎಂಬುದು ಅವರ ನಿಲುವಾಗಿತ್ತು. ಜ್ಞಾನೋತ್ಪಾದನೆಯು ಯಜ್ಞದಂತೆ ಪವಿತ್ರವಾದ ಕ್ರಿಯೆ. ಅವುಗಳಲ್ಲಿ ಭಾಗವಹಿಸುವವರೆಲ್ಲರೂ ಸಮರ್ಪಿತರಾಗಿ, ಸತ್ಯಪ್ರಿಯರಾಗಿರಬೇಕೆಂಬುದೂ ಅವರದ್ದೇ ಅಭಿಪ್ರಾಯ. ನಮ್ಮ ಕಾಲದ ಮಾಹಿತಿಯ ಮಹಾಪ್ರವಾಹದಲ್ಲಿ ಕೊಚ್ಚಿಹೋಗಿ ಅನಾದರಕ್ಕೆ ತುತ್ತಾಗುತ್ತಿರುವ ಜ್ಞಾನನಿಷ್ಠೆಯು ಉಳಿಯುವುದಕ್ಕೆ ಕೃಷ್ಣಭಟ್ಟರಂಥವರ ಆದರ್ಶ ನಮಗೆ ನೆರವಾಗುತ್ತದೆ.

ಪುತ್ತೂರಿನ ಸಮೀಪದ ಸೇಡಿಯಾಪು ಗ್ರಾಮದಲ್ಲಿ ಜನಿಸಿದ ಕೃಷ್ಣಭಟ್ಟರು ಮದರಾಸ್ ವಿಶ್ವವಿದ್ಯಾಲಯದಿಂದ ‘ವಿದ್ವಾನ್’ ಪದವಿಯನ್ನು ಪಡೆದು ಮಂಗಳೂರಿನ ಎಲೋಸಿಯಸ್ ಹೈಸ್ಕೂಲಿನಲ್ಲಿ ಕನ್ನಡಪಂಡಿತರಾಗಿ ಸೇವೆ ಸಲ್ಲಿಸಿದರು. ಪಾರಂಪರಿಕವಾಗಿ ಬಂದ ಆಯುರ್ವೇದವಿದ್ಯೆಯನ್ನು ಕರಗತಮಾಡಿಕೊಂಡು ವೈದ್ಯವೃತ್ತಿಯನ್ನೂ ಕೆಲಕಾಲ ನಡೆಸಿದರು. ಹೀಗೆ ಮೇಷ್ಟರಾಗಿ, ‘ನಾಟೀವೈದ್ಯ’ರಾಗಿ ಕೆಲಸ ಮಾಡಿದ ಸೇಡಿಯಾಪು ಕೃಷ್ಣಭಟ್ಟರು ಕನ್ನಡನಾಡು ಕಂಡಂಥ ಪ್ರಥಮಶ್ರೇಣಿಯ, ಪಂಕ್ತಿಪಾವನರಾದ ವಿದ್ವಾಂಸರಲ್ಲಿ ಒಬ್ಬರೆನಿಸಿಕೊಂಡ ಪರಿ ದಿಟವಾಗಿ ರೋಚಕ, ಸ್ಫೂರ್ತಿದಾಯಕ. “ಪಂಡಿತರೆಂದರೆ ಹೇಗಿರುತ್ತಾರೆಂದು ನಾನು ಸಂತೋಷದಿಂದ ಬೆರಳೆತ್ತಿ ತೋರಿಸಬಹುದಾದವರು ಸೇಡಿಯಾಪು” ಎಂದು ಶಿವರಾಮ ಕಾರಂತರು ಅವರನ್ನು ಕೊಂಡಾಡಿದ್ದಾರೆ.

ಕಿತ್ತುತಿನ್ನುವ ಬಡತನ ಮತ್ತು ಬಾಲ್ಯದಿಂದಲೂ ಅಂಟಿಕೊಂಡು ಬಂದ ಅನಾರೋಗ್ಯ — ಇದಾವುದನ್ನೂ ಲೆಕ್ಕಿಸದೆ ಪ್ರಖರವಾದ ಧೀಶಕ್ತಿಯ ನೆರವಿನಿಂದ ಕೃಷ್ಣಭಟ್ಟರು ತಮ್ಮ ಚಿದ್ರಂಗವನ್ನು ರೂಪಿಸಿಕೊಂಡರು. ಕನ್ನಡ, ಸಂಸ್ಕೃತ, ತುಳು, ತಮಿಳು, ಹಿಂದಿ, ಮಲಯಾಳ, ತೆಲುಗು ಮುಂತಾದ ಭಾಷೆಗಳನ್ನು ಅಭ್ಯಾಸ ಮಾಡಿ ಅವುಗಳಲ್ಲಿನ ಶ್ರೇಷ್ಠಗುಣಗಳನ್ನು ಒಗ್ಗೂಡಿಸಿಕೊಂಡರು. ಅವರು ಜನಿಸಿದ ಸೇಡಿಯಾಪು ಗ್ರಾಮವಾಗಲಿ ಅಥವಾ ಮುಂದೆ ಅವರು ನೆಲೆಸಿದ ಮಣಿಪಾಲವಾಗಲಿ ಸಂಪನ್ಮೂಲಗಳ ದೃಷ್ಟಿಯಿಂದ ಅಭಿವೃದ್ಧಿಯನ್ನೇ ಕಾಣದ ಪ್ರದೇಶಗಳು. ಇಂತಿದ್ದರೂ ಕೃಷ್ಣಭಟ್ಟರ ಶಾಸ್ತ್ರಾಧ್ಯಯನವು ಬಿರುಕಿಲ್ಲದೆ ಸಾಗಿತು. ಅವರ ಲೀಲಾಕ್ಷೇತ್ರವಾದ ಛಂದಸ್ಸಿನಂಲ್ಲಂತೂ ಅವರು ನಿಸ್ಸೀಮರಾದರು. ಈ ದಿಶೆಯಲ್ಲಿನ ಅವರ ಕೊಡುಗೆ ಅಪಾರ, ಅನ್ಯಾದೃಶ. ಅವರಿಗಂಟಿಕೊಂಡು ಬಂದ ಎಷ್ಟೋ ಬೇನೆಗಳಿಗಿಂತಲೂ ಅವರನ್ನು ಹೆಚ್ಚಾಗಿ ಕಾಡಿದ್ದು ಕಣ್ಣಿನ ಬಾಧೆ. ಇದು ಎಷ್ಟು ತೀವ್ರವಾಗಿತ್ತೆಂದರೆ ಅವರು ಸ್ವೇಚ್ಛೆಯಿಂದ ಕಣ್ಣುಗಳನ್ನು ತೆಗೆಸಿಕೊಂಡು ದೃಷ್ಟಿಹೀನರಾದರು. ಆದರೆ ದರ್ಶನಹೀನರಾಗಲಿಲ್ಲ. ಛಂದೋಮಾರ್ಗದಲ್ಲಿ ಸಾಗುವ ಸಮಸ್ತರಿಗೂ ಅನಿವಾರ್ಯವಾದ ದಾರಿದೀವಿಗೆಯಾದರು.

ಸೇಡಿಯಾಪು ಕೃಷ್ಣಭಟ್ಟರ ವ್ಯಕ್ತಿತ್ವದಲ್ಲಿ ಎದ್ದುಕಾಣುವ ಗುಣವೊಂದಿದ್ದರೆ ಅದು ಸ್ವೋಪಜ್ಞತೆ. ವಿಚಾರವು ಯಾವುದೇ ಆಗಲಿ, ಅದನ್ನವರು ತಮ್ಮ ಅನುಭವ-ಯುಕ್ತಿಗಳ ನೆಲೆಯಲ್ಲಿ ಶೋಧಿಸಿ, ಸತತವಾಗಿ ಮನನ ಮಾಡಿ ಅದರ ಬಗೆಗೆ ಸ್ಪಷ್ಟವಾದ ಅಭಿಪ್ರಾಯವನ್ನು ರೂಪಿಸಿಕೊಳ್ಳುವರು. ಇತರಪ್ರಮಾಣಗಳಿಗೆ ಅವರಿಂದ ಸಿಗುತ್ತಿದ್ದುದು ಹೆಚ್ಚೆಂದರೆ ಎರಡನೆಯ ದರ್ಜೆಯ ಮರ್ಯಾದೆ. ಜೀವನದುದ್ದಕ್ಕೂ ಅವರ ಅವಧಾರಣೆಯಿದ್ದದ್ದು ಸ್ವಾನುಭವದ ಮೇಲೆಯೇ. ಆದುದರಿಂದಲೇ ಅವರು ಚಿಕ್ಕವಯಸ್ಸಿನಲ್ಲಿಯೇ ಕುರಾನ್, ಬೈಬಲ್, ಧಮ್ಮಪದ ಮುಂತದ ಗ್ರಂಥಗಳನ್ನು ಅನುವಾದಗಳಲ್ಲಿ ಓದಿಕೊಂಡು ಅವುಗಳ ಸಾರಾಸಾರವನ್ನು ಚೆನ್ನಾಗಿ ಗ್ರಹಿಸಿದ್ದರು. ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಾಗವತ — ಇವುಗಳಂತೂ ಸರಿಯೇ ಸರಿ.

Continue reading

One clap, two clap, three clap, forty?

By clapping more or less, you can signal to us which stories really stand out.