ಸಾಲ್ವ್‌ ನಿಂಜಾ ಯುವ ಶಕ್ತಿ: ನೆಲಮಂಗಲದೊಲ್ಲೊಂದು ನೂತನ ಚಳುವಳಿ

Reap Benefit
Reap Benefit
Published in
3 min readSep 22, 2020

ಇಲ್ಲಿ ಯಾರೂ ಮೇಲೂ ಅಲ್ಲ ಯಾರೂ ಕೀಳೂ ಅಲ್ಲ, ಮತ್ತು ನಾನು ಚಿಕ್ಕವಳೆಂದು

ನನ್ನನ್ನು ಕಡೆಗಣಿಸುವುದಿಲ್ಲ ಅದು ನನಗೆ ಇಷ್ಟವಾಯಿತು, ಯುವ ಶಕ್ತಿ ತಂಡದಿಂದ

ನಾವು ಸಹ ನಮ್ಮ ಊರಿಗೆ ಸೇವೆ ಸಲ್ಲಿಸಬಹುದೆಂಬ ನಂಬಿಕೆ ಮತ್ತು ಭರವಸೆ

ಬಂದಿದೆ ” -

ಲಾಕ್‌ ಡೌನ್‌ ನಂತರ ಮೊದಲ ಬಾರಿ ಮುಖಾ ಮುಖಿ ಭೇಟಿಯಾದ

ಯುವ ಶಕ್ತಿ ಪಂಚಾಯತ್‌ ಮಟ್ಟದ ಸದಸ್ಯರುಗಳು ನೆಲಮಂಗಲದಲ್ಲಿ ನಡೆಸಿದ

ಮೊದಲ ಸಭೆಯಲ್ಲಿ ಸರಸ್ವತಿಯವರು ಯುವ ಶಕ್ತಿಯ ಬಗ್ಗೆ ಹೇಳಿದ ಮಾತುಗಳಿವು. ಸರಸ್ವತಿ ಜೊತೆ ಇನ್ನೂ ಹಲವು ಸದಸ್ಯರುಗಳು ಹಾಜರಿದ್ದು, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮತ್ತು ತಮ್ಮ ತಮ್ಮ ಊರುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ದೇಶ ಲಾಕ್‌ ಡೌನ್‌ ಆಗಿ ಎಲ್ಲವೂ ಸ್ಥಬ್ದವಾಗುತ್ತಿದ್ದ ಸಮಯದಲ್ಲಿ ನೆಲಮಂಗಲದಲ್ಲಿ ಯುವ ಜನತೆಯಿಂದ, ಯುವಜನತೆಗಾಗಿ, ಯುವಜನತೆಗೋಸ್ಕರವೇ ಒಂದು ಚಳುವಳಿಯು ಸದ್ದಿಲ್ಲದೇ ಆರಂಭವಾಗಿತ್ತು. ಭಾರತ ದೇಶವು ಸಾಮಾಜಿಕ, ಆರ್ಥಿಕ, ರಾಜಾಕೀಯ ಮತ್ತು ಪರಿಸರ ರಂಗಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಸವಾಲುಗಳಿಗೆ ಯುವ ನಾಯಕತ್ವದಿಂದಲೇ ಉತ್ತರ ಸಿಗುವುದು ಎಂಬ ನಿಲುವಿನಿಂದ ಹುಟ್ಟಿಕೊಂಡ ಚಳುವಳಿಯೆ ಯುವ ಶಕ್ತಿ.

ಯುವ ಶಕ್ತಿ ತಂಡವು ಈ ವರ್ಷದ ಆರಂಭದಲ್ಲಿಯೇ ತನ್ನ ಕೆಲಸ ಆರಂಭಿಸಿತಾದರೂ ಕೊರೋನಾ ಪಿಡುಗಿನಿಂದಾಗಿ ಆನ್‌ಲೈನ್‌ ಸಭೆ ಮತ್ತು ಕಾರ್ಯಕ್ರಮಗಳಿಗೆ ಸೀಮಿತಗೊಳ್ಳಬೇಕಾಯಿತು. ಆದರೆ, ಲಾಕ್‌ಡೌನ್‌ನಿಂದಾಗಿ ತೊಂದರೆಗೊಳಾದ ಎಷ್ಟೋ ಕುಟುಂಬಗಳ ನೋವಿಗೆ ತುರ್ತಾಗಿ ಸ್ಪಂದಿಸಿದ ಯುವ ಶಕ್ತಿ ತಂಡವು ಮುನ್ನೂರಕ್ಕೂ ಹೆಚ್ಚಿನ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿತು. ಮತ್ತು ನೆಲಮಂಗಲ ನಗರದ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ ವಿತರಣೆ ಮಾಡಲಾಯಿತು. ಇಷ್ಟೂ ಕೆಲಸವನ್ನು ಯುವ ಶಕ್ತಿಯ ಸ್ವಯಂ ಸೇವಕರು ಮತ್ತು ಸದಸ್ಯರೇ ನಿರ್ವಹಿಸಿದರು

ಯುವಜನತೆಯೇ ಏಕೆ?

“ಬೆಳೆಯುವ ಸಿರಿ ಮೊಳಕೆಯಲ್ಲೆ” ನಾವು ಶಾಲೆಯಲ್ಲಿ ಓದಿದ ಒಂದು ಪಾಠದ ಹೆಸರು ಇದು. ಅದರಲ್ಲಿ ವಿವೇವಕಾನಂದರ ಬಗ್ಗೆ ಹೇಳಲಾಗಿತ್ತು. ನಾನು ಯುವಶಕ್ತಿಯ ಭಾಗವಾಗಿ ಕೆಲಸಕ್ಕೆ ಸೇರುವ ಮುನ್ನ ಒಂದು ದಿನ ರೀಪ್‌ ಬೆನಿಫಿಟ್‌ ಸಂಸ್ಥಯು ಕೆಲಸ ಮಾಡುತ್ತಿರುವ ವಿಜಯನಗರದ ಒಂದು ಸರ್ಕಾರೇತರ ಶಾಲೆಗೆ ಭೇಟಿ ನೀಡಿದೆ. ಅಂದು ಶಾಲೆಯಲ್ಲಿ ಸಾಲ್ವ್‌ ನಿಂಜಾ ಕಾರ್ಯಕ್ರಮದ ಪ್ರಶಸ್ತಿ ಸಮಾರಂಭ. ಮಕ್ಕಳು ಹೇಗೆ ತಾವು ತಮ್ಮ ಮನೆಗಳಲ್ಲಿ ತಾವು ನೀರು ಉಳಿಸುವುದರ ಮತ್ತು ತಮ್ಮ ವಾರ್ಡ್ಗಳಲ್ಲಿ ಕಸದ ಸಮಸ್ಯೆಯನ್ನು ಪರಿಹರಿಸುವಂತೆ ಕೌನ್ಸಿಲರ್ಗೆ ಮನವಿ ಸಲ್ಲಿಸಿದರ ಬಗ್ಗೆ ತಾವು ಬದಲಾವಣೆಯತ್ತ ತೆಗೆದುಕೊಂಡ ಕ್ರಮಗಳ ಬಗ್ಗೆ ಬಹಳ ಜವಾಬ್ದಾರಿಯುತ ನಾಯಕರಂತೆ ಹೇಳುತ್ತಿದ್ದರು.

ಆಗ ತಾನೆ ಕಾಲೇಜು ಮುಗಿಸಿ ಬಂದ ನನಗೆ ನನ್ನ ಬದ್ಧತೆಯ ಬಗ್ಗೆ ಪ್ರಶ್ನೆ ಮಾಡಿತು. ಗಾಂಧೀಜಿಯವರು ಹೇಳಿರುವ ಹಾಗೆ “ಜಗತ್ತು ಬದಲಾಗಬೇಕಾದರೆ ಮೊದಲು ನೀನು ಬದಲಾಗಬೇಕು” ಎಂಬ ಮಾತು ವಾಸ್ತವರೂಪಕ್ಕೆ ತರುವ ಬಗೆ ಹೇಗೆ ಎಂಬುದು ನನಗೆ ಕಂಡಿತು.

ಆಗ ಮನದಟ್ಟಾದ ವಿಷಯವೇನೆಂದರೆ ದೇಶ ಪ್ರಗತಿಪರ ಬದಲಾವಣೆ ಹಾದಿಯಲ್ಲಿ ಮುನ್ನಡೆಯಬೇಕೆಂದರೆ ಅದರ ಚುಕ್ಕಾಣಿಯನ್ನು ಯುವ ಜನತೆಯನ್ನು ಹಿಡಿಯಬೇಕು. ಅಂದರೆ ಯುವ ಜನತೆ ಬದಲಾದರೆ ಮಾತ್ರ ಮುಂಬರುವ ಪೀಳಿಗೆಗಳಿಗೆ ಹೊಸ ದಾರಿ ಕಟ್ಟಿಕೊಡಬಹುದು.

ಯುವ ಶಕ್ತಿ ಮಾತಿಗಿಂತ ಕೆಲಸದ ಮೇಲೆ ನಂಬಿಕೆಯಿಡುತ್ತದೆ

ಯುವ ಶಕ್ತಿಯು ರೀಪ್‌ ಬೆನೆಫಿಟ್‌ ಸಂಸ್ಥೆಯ ಸಹಯೋಗದೊಂದಿಗೆ ನೆಲಮಂಗಲದ ಸ್ಥಳೀಯ ನಾಗರಿಕ ಮತ್ತು ಪರಿಸರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಿ ಅವುಗಳಿಗೆ ಪರಿಹಾರ ಹುಡುಕುವ ಒಂದು ಸಾಲ್ವ್‌ ನಿಂಜಾ ಪಡೆಯನ್ನು ಕಟ್ಟಲಿದೆ. ಈ ಮೂಲಕ ಯುವ ಜನತೆಯಲ್ಲಿ 21 ನೇ ಶತಮಾನದ ಕೌಶಲ್ಯವನ್ನು ಅಳವಡಿಸಿ ಭವಿಷ್ಯದ ನಾಯಕ/ಕಿ ಯರನ್ನು ಬೆಳೆಸಲಿದೆ.

ಅದರಂತೆ ಜಾತಿ, ಲಿಂಗ, ಭಾಷೆ, ಧರ್ಮ, ಅಂತಸ್ತು ಹೀಗೆ ಯಾವುದೇ ಆಧಾರದ ಮೇಲೆ ತಾರತಮ್ಯವಿಲ್ಲದೆ ಬ್ರಾತೃತ್ವವುಳ್ಳ ಪ್ರಜೆಗಳಾಗಿ ಪರಿವರ್ತಿತರಾಗುವುದು. ಸರ್ವರಿಗೂ ಸಮಾನ ಹಕ್ಕು ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಸಮಾಜವಾಗುವತ್ತ ಕೆಲಸ ಮಾಡುವುದು. ಸರ್ವರಿಗೂ ಒಂದು ಗೌರವಾನ್ವಿತ ಜೀವನವನ್ನು ನಡೆಸುವ ಒಂದು ಸಮಾನತೆ ಪ್ರಧಾನ ಸಮಾಜ ಕಟ್ಟುವುದು ಯುವ ಶಕ್ತಿ ಮೂಲ ಆಶಯವಾಗಿರುತ್ತದೆ.

ಈ ಗುರಿಯನ್ನು ತಲುಪಲು ಸ್ಥಳೀಯ ಆಡಳಿತ, ಕಲೆ, ಸಂಸ್ಕೃತಿ, ಆರೋಗ್ಯ, ಉದ್ಯೋಗ, ಮತ್ತು ಶಿಕ್ಷಣ ಹೀಗೆ ಯುವ ಜನತೆಗೆ ಬಹಳ ಹತ್ತಿರವಾದ ಮತ್ತು ಬಹಳ ಅವಶ್ಯಕವಾದ ವಿಷಯಗಳ ಮೇಲೆ ಕೆಲಸ ಮಾಡಲಿದೆ.

ಇಲ್ಲಿ ಶಕ್ತಿಯೆಂದರೆ ತೋಳ್ಬಲವಲ್ಲ ಅಥವಾ ರಾಜಕೀಯ ಶಕ್ತಿಯೂ ಅಲ್ಲ. ಬದಲಿಗೆ ಭಾರತ ಸಂವಿಧಾನದ ಪ್ರಸಾವನೆಯಲ್ಲಿ ಮೂಡಿರುವ ಬ್ರಾತೃತ್ವ, ಸಮಾನತೆ ಮತ್ತು ಸ್ವಾತಂತ್ರ್ಯ ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಮತ್ತು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಯಾವುದೇ ಆಮಿಷಗಳಿಗೆ ಅಥವಾ ರಾಗ ದ್ವೇಶಗಳಿಗೆ ತಮ್ಮ ಸಮಗ್ರತೆಯನ್ನು ರಾಜಿಯಾಗದಂತೆ ಜವಾಬ್ದಾರಿಯುತ ಪ್ರಜೆಗಳಾಗಿ ಬದುಕುತ್ತಿರುವ ಯುವ ಜನತೆಯ ಮನೋಬಲ.

ಈ ಮನೋಬಲ ಉಳ್ಳ ಯುವಜನತೆಯು ತಮ್ಮ ವೈಯಕ್ತಿಕ, ಸಾಮಾಜಿಕ, ಮತ್ತು ರಾಜಕೀಯ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಈ ಮೌಲ್ಯಗಳ ಪ್ರತಿಬಿಂಬವಾಗಿರುವಂತೆ ದುಡಿಯುವುದೇ ಯುವ ಶಕ್ತಿ.

--

--

Reap Benefit
Reap Benefit

Engaging youngsters in solving local environmental problems with data and solutions #energy #waste #water #sanitation